ಮೈಸೂರು: ವ್ಯಕ್ತಿಯೊಬ್ಬ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಈತನಿಂದ ದುಪ್ಪಟ್ಟು ಹಣ ಕೇಳಿರುವ ಆಸ್ಪತ್ರೆಯವರು ವ್ಯಕ್ತಿಯ ಮಗಳನ್ನು ಕೂಡಿಹಾಕಿ ಕಿರುಕುಳ ನೀಡಿರುವ ಘಟನೆ ನಗರದ ಹೆಬ್ಬಾಳು ಬಡಾವಣೆಯಲ್ಲಿ ನಡೆದಿದೆ.
ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹಂಪಾಪುರ ಗ್ರಾಮದ ವ್ಯಕ್ತಿಯ ಕೊರೊನಾ ಚಿಕಿತ್ಸೆ ಸಂದರ್ಭದಲ್ಲಿ ಆಸ್ಪತ್ರೆಯವರು 1.20 ಲಕ್ಷ ರೂಪಾಯಿ ಕಟ್ಟಿಸಿಕೊಂಡಿದ್ದರು. ನಂತರ ಆತ ಡಿಸ್ಚಾರ್ಜ್ ಆಗುವ ವೇಳೆ ಮತ್ತೆ 2 ಲಕ್ಷ ರೂಪಾಯಿ ಕೇಳಿದ್ದು, ದಾಖಲಾಗಿದ್ದ ವ್ಯಕ್ತಿ ಹೆದರಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದನು. ಆದರೆ, ಆ ವ್ಯಕ್ತಿಯ ಮಗಳನ್ನು ಆಸ್ಪತ್ರೆಯವರು ಕೂಡಿಹಾಕಿ ಬಾಕಿ ಹಣ ಕಟ್ಟುವಂತೆ ಕಿರುಕುಳ ನೀಡಿದ್ದಾರೆ. ಊಟ ತಿಂಡಿ ನೀಡದೇ ಕೂಡಿಹಾಕಿ ಹಣ ಪಾವತಿಸುವಂತೆ ಹೆದರಿಸಿದ್ದಾರೆ.
ನಂತರ ಸಂಬಂಧಿಕರು ಆಸ್ಪತ್ರೆಗೆ ಬಂದು ವಿಚಾರಿಸಿ, ಘಟನೆ ಬಗ್ಗೆ ರೈತ ಸಂಘಟನೆಗೆ ವಿಷಯ ತಿಳಿಸಿ ಪ್ರತಿಭಟನೆ ನಡೆಸಿದ ಬಳಿಕ ಹೆಣ್ಣು ಮಗಳನ್ನು ಹೊರಗೆ ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಆ ಹೆಣ್ಣು ಮಗಳು ನನಗೆ ಬಾಕಿ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ. ವಿಷದ ಇಜೆಂಕ್ಷನ್ ಹಾಕುತ್ತೇನೆ ಎಂದು ಹೆದರಿಸುತ್ತಿದ್ದರು, ಹಣ ನೀಡುವವರೆಗೂ ವಾಪಸ್ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.
ಸ್ಥಳಕ್ಕಾಗಿಮಿಸಿದ ಪೊಲೀಸರು ಆಸ್ಪತ್ರೆಯವರ ಜೊತೆ ಮಾತುಕತೆ ನಡೆಸಿ ಪ್ರಕರಣ ಬಗೆಹರಿಸಿದ್ದಾರೆ.