ಮೈಸೂರು : ನಗರದ ಸರ್ಕಾರಿ ಕೆ ಆರ್ ಆಸ್ಪತ್ರೆಯ ಕೋವಿಡ್ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ವೈದ್ಯರ ಮೇಲೆ ಹಲ್ಲೆಯಾಗುತ್ತಿದೆ. ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಕಿರಿಯ ವೈದ್ಯರು ಪ್ರತಿಭಟಿಸಿದರು.
ಕಳೆದ ಶನಿವಾರ 23 ವರ್ಷದ ವ್ಯಕ್ತಿಯೊಬ್ಬ ಕೋವಿಡ್‌ನಿಂದ ಸಾವನ್ನಪ್ಪಿದ್ದ. ಅವರ ಸಂಬಂಧಿಕರು ಮೃತ ವ್ಯಕ್ತಿಯನ್ನು ನೋಡಲು ಬಿಡಲಿಲ್ಲ ಎಂದು ಐಸಿಯು ವಿಭಾಗದ ಬಾಗಿಲು ಮುರಿದು, ಕಲ್ಲು ತೂರಾಟ ನಡೆಸಿ ವೈದ್ಯರ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಕಟ್ರೋಲ್ ರೂಂಗೆ ಕರೆ ಮಾಡಿದಾಗ ಪೊಲೀಸರು ಬರಲು ತಡವಾಯಿತು. ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಕಡಿಮೆ ಇದ್ದು ಕೂಡಲೇ ನಮಗೆ ಸೂಕ್ರ ಭದ್ರತೆ ಒದಗಿಸುವಂತೆ ಕಿರಿಯ ವೈದ್ಯರು ಆಗ್ರಹಿಸಿದರು.
ಸ್ಥಳಕ್ಕೆ ಡಿಸಿಪಿ ಪ್ರಕಾಶ್ ಗೌಡ ಆಗಮಿಸಿ ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಿ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದರು. ಬಳಿಕ ವೈದ್ಯರು ಪ್ರತಿಭಟನೆ ಕೈಬಿಟ್ಟರು.