ಮೈಸೂರು: ಆಹಾರ ಅರಸಿ ವೀರನಹೊಸಹಳ್ಳಿ ಸಮೀಪದ ಪೆಂಜಳ್ಳಿ ಗ್ರಾಮಕ್ಕೆ ಕಾಡಾನೆಗಳು ಲಗ್ಗೆಯಿಟ್ಟಿದ್ದವು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಮರಳಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವೀರನಹೊಸಹಳ್ಳಿ ಸಮೀಪದ ಹೊಸ ಪೆಂಜಳ್ಳಿ ಗ್ರಾಮಕ್ಕೆ ಭಾನುವಾರದಂದು ಕಾಡಾನೆಗಳು ಬಂದು ನಿನ್ನೆ ರಾತ್ರಿ ಅಲ್ಲೇ ಬೀಡು ಬಿಟ್ಟಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡುವಂತೆ ಮಾಡಿತ್ತು. ಸ್ಥಳೀಯರು ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಸುಮಾರು 8 ಗಂಟೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆನೆಗಳು ಊರಿನೊಳಗೆ ನುಗ್ಗಿ ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಉಂಟುಮಾಡಿದ್ದವು. ಆದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗೆ ಓಡಿಸಿದ್ದಾರೆ.
ಇದನ್ನೂ ಓದಿ: ವಿಜಯನಗರದಲ್ಲಿ ಚಿರತೆ ದಾಳಿ, ಬಳ್ಳಾರಿಯಲ್ಲಿ ಸಿಡಿಲು ಬಡಿದು ಯುವಕ ಸಾವು
ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಿಗೆ ಆನೆಗಳು ಬರುವುದು ಹೆಚ್ಚಾಗಿದ್ದು, ಆನೆಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಹಾಗೂ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.