ಮೈಸೂರು: ನಗರದ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ತನ್ವೀರ್ ಸೇಠ್ ಅವರ ಮೇಲೆ ಭಾನುವಾರ ತಡ ರಾತ್ರಿ ಯುವಕನೋರ್ವ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಗಾಯಗೊಂಡಿರುವ ತನ್ವೀರ್ ಸೇಠ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೌಸಿಯಾನಗರ ಫಾರಹಾನ್ (28) ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ಹೇಳಲಾಗುತ್ತಿದೆ.
ತನ್ವೀರ್ ಸೇಠ್ ಅವರು ವಧು- ವರರಿಗೆ ಆಶೀರ್ವಾದಿಸಿ ಬೋಜನ ಸೇವಿಸಿದರು. ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾದಲ್ಲಿ ಗಾಯಕರ ಹಾಡುತ್ತಿದ್ದ ಹಾಡುಗಳನ್ನು ಕೇಳುತ್ತಿದ್ದ ವೇಳೆ ಆರೋಪಿ ಏಕಾಏಕಿ ದಾಳಿ ನಡೆಸಿದ್ದಾನೆ. ಸುಮಾರು 12 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಹಿಡಿದಿರುವ ಬೆಂಬಲಿಗರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಶಾಸಕರ ಮೇಲೆ ಹಲ್ಲೆ ಎಸಗಿರುವುದಕ್ಕೆ ಸಂಬಂಧಿಸಿದಂತೆ ಕಾರಣ ತಿಳಿದು ಬಂದಿಲ್ಲ. ಆಸ್ಪತ್ರೆಗೆ ಆಗಮಿಸಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.