ಮೈಸೂರು: ವಿಧಾನ ಪರಿಷತ್ಗೆ ನಾಮನಿರ್ದೇಶನಗೊಂಡಿರುವ ಹೆಚ್.ವಿಶ್ವನಾಥ್ ಕುರಿತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದು ಹೀಗೆ.
ಹೆಚ್.ವಿಶ್ವನಾಥ್ ಛಲ ಬಿಡದ ತ್ರಿವಿಕ್ರಮನ ರೀತಿಯಲ್ಲಿ ಎಂಎಲ್ಸಿ ಆಗಿದ್ದಾರೆ. ಈಗ ಅಟ್ಟಕ್ಕೆ ಏರಿದ್ದಾರೆ. ಸ್ವರ್ಗಕ್ಕೆ ಏರುವುದರ ಜೊತೆಗೆ ವಿಶ್ವನಾಥ್ ಬಹಳ ಯೋಚನೆ ಮಾಡಬೇಕಾಗಿದೆ. ಸರ್ಕಾರದಲ್ಲಿ ಉಳಿದಿರುವುದು ಕೆಲವೇ ಕೆಲವು ಮಂತ್ರಿ ಸ್ಥಾನ. ಅವರಿಗೆ ಎಚ್ಚರಿಕೆಯಿಂದ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ವಿಶ್ವನಾಥ್ಗೆ ಮಂತ್ರಿ ಸ್ಥಾನ ಕಷ್ಟ
ಈಗಾಗಲೇ ಸಾಮಾಜಿಕ ನ್ಯಾಯದ ಅನುಸಾರ ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜ್ ಮಂತ್ರಿಗಳಾಗಿದ್ದಾರೆ. ಮುಂದಿನ ಬಾರಿ ಎಂಟಿಬಿ ನಾಗರಾಜ್, ಆರ್.ಶಂಕರ್ ಸಚಿವರಾಗಬಹುದು. ಈ ಸಂದರ್ಭದಲ್ಲಿ ವಿಶ್ವನಾಥ್ಗೆ ಮಂತ್ರಿ ಸ್ಥಾನ ಕಷ್ಟವಾಗಬಹುದು. ನಾನು ವಿಶ್ವನಾಥ್ಗೆ ಚುನಾವಣೆಯಲ್ಲಿ ಸ್ಪರ್ಧೆ ಬೇಡ. ನೇರವಾಗಿ ಎಂಎಲ್ಸಿ ಸ್ಥಾನ ಪಡೆದು ಮಂತ್ರಿಯಾಗಿ ಎಂದು ಹೇಳಿದ್ದೆ. ಆದರೆ ನನ್ನ ಮಾತನ್ನು ಕೇಳಲಿಲ್ಲ ಎಂದರು.
ನನ್ನ ಮಾತು ಕೇಳಿದ್ದರೆ ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುತ್ತಿದ್ದರು. ಆದರೆ ಈ ನಡುವೆ ಕಷ್ಟಪಟ್ಟು ಎಂಎಲ್ಸಿ ಆಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂತ್ರಿಯಾಗುವುದು ಸ್ವಲ್ಪ ಕಷ್ಟ ಎಂದು ಸಂಸದರು ತಮ್ಮ ಅಭಿಪ್ರಾಯ ಹೊರ ಹಾಕಿದರು.