ಮೈಸೂರು: 'ನಿಮ್ಮ ಹೆಸರಲ್ಲೇ ಸ್ವಂತಿಕೆ ಇಲ್ಲ. ರಾಜೀವ್ ಗಾಂಧಿ ಮಗಳ ಹೆಸರನ್ನು ಇಟ್ಟುಕೊಂಡಿದ್ದೀರಾ' ಎಂದು ಸಂಸದ ಪ್ರತಾಪ್ ಸಿಂಹ (MP Pratap Simha) ಶಾಸಕ ಪ್ರಿಯಾಂಕ್ ಖರ್ಗೆ (MLA Priyank Kharge) ಬಗ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, 'ಮರಿಖರ್ಗೆ ನನಗೆ ಪೇಪರ್ ಸಿಂಹ ಅಂದರೆ ಬೇಸರ ಇಲ್ಲ. ನಾನು ಪತ್ರಿಕೆ ಮೂಲಕವೇ ಘರ್ಜಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಆದ್ರೆ ಪ್ರಿಯಾಂಕ್ ಖರ್ಗೆ (Priyank Kharge) ಹೆಸರಿನಲ್ಲಿ ಗಂಡೋ, ಹೆಣ್ಣೋ ಎಂಬ ಕ್ಲ್ಯಾರಿಟಿ ಇಲ್ಲ. ಹೆಸರಿನಲ್ಲೇ ಮರಿ ಖರ್ಗೆಗೆ ಸ್ವಂತಿಕೆ ಇಲ್ಲ' ಎಂದು ವ್ಯಂಗ್ಯವಾಡಿದರು.
'ಶೋಷಿತರ ಹೆಸರು ಹೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ಕುಟುಕಿದರು. ರಾಜ್ಯ ಕಾಂಗ್ರೆಸ್‌ನವರೇ ದುಡ್ಡು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ಅಕಸ್ಮಾತ್ ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು (Hacker Shreeki) ನಾವು ಏಕೆ ಬಂಧಿಸುತ್ತಿದ್ದೆವು?' ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.
'ಸಿದ್ದರಾಮಯ್ಯರದ್ದು ಉಗಿದು ಓಡಿ ಹೋಗುವ ವ್ಯಕ್ತಿತ್ವ. ಯಾವ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೀರಾ?' ಎಂದರು.
ಕಾಂಗ್ರೆಸ್ ನಾಯಕರಿಗೆ ಸವಾಲು:
'ನಿಮ್ಮ ಯಾವ ಅಕೌಂಟ್ ಹ್ಯಾಕ್ ಆಗಿದೆ ಬಹಿರಂಗಪಡಿಸಿ. ಒಂದೇ ಒಂದು ಅಕೌಂಟ್ ನಂಬರ್ ಕೊಡಿ. ಒಂದು ಸಾವಿರ ಕಳೆದುಕೊಂಡರೂ ಇವತ್ತು ದೂರು ಕೊಡ್ತಾರೆ. ಏಳು ಸಾವಿರ ಕೋಟಿ ಅಂದ್ರೆ ಯಾಕೆ ದೂರು ಕೊಟ್ಟಿಲ್ಲ. ನಿಮ್ಮ ಧರ್ಮ ಸಂಕಟ ಏನು ಅಂತ ನನಗೆ ಚೆನ್ನಾಗಿ ಗೊತ್ತು. ಹಿಂದೆ ಪರ್ಸಂಟೇಜ್ ಪಡೆದಿದ್ದರಿಂದಲೇ 2018ರಲ್ಲಿ ಹೀನಾಯ ಸೋಲು ಕಂಡಿದ್ದು. ನಿಮ್ಮವರೇ ಹೂಡಿರುವ ಅಕೌಂಟ್ ಹ್ಯಾಕ್ ಆಗಿರಬೇಕು ನೋಡಿ' ಎಂದು ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದರು.
'ಯಾರೋ ಬರೆದು ಕೊಟ್ಟ ಬಜೆಟ್ ಅನ್ನು ಓದಿದಂತಲ್ಲ. 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯಗೆ ಬಿಟ್ ಕಾಯಿನ್ ಬಗ್ಗೆ ಗೊತ್ತಿರಬೇಕಲ್ವಾ. ದಯಮಾಡಿ ಜನಸಾಮಾನ್ಯರಿಗೆ ಬಿಟ್ ಕಾಯಿನ್ ಬಗ್ಗೆ ಹೇಳಿ. ಮಾತೆತ್ತಿದರೆ ಮೋದಿ ಬಗ್ಗೆ ಟೀಕಿಸುತ್ತೀರಾ' ಎಂದು ಕುಟುಕಿದರು.
ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ:
'ಬೊಮ್ಮಾಯಿ ನೆಮ್ಮದಿಯಿಂದ ಆಡಳಿತ ನಡೆಸಬಾರದೆಂದು ಬಾಹ್ಯ, ಆಂತರಿಕ ಶತೃಗಳು ಒಟ್ಟುಗೂಡಿ ಸಂಚು ರೂಪಿಸುತ್ತಿದ್ದಾರೆ. ಭ್ರಷ್ಟಾಚಾರದಿಂದ ಬಂದ ಹಣ ಕಳೆದುಕೊಳ್ಳುವ ಭೀತಿಯಿಂದ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಎಷ್ಟೇ ಗಾಳಿ ಸುದ್ದಿ ಹಬ್ಬಿಸಿದರೂ ಬೊಮ್ಮಾಯಿ ನೇತೃತ್ವದಲ್ಲೇ 2023ರ ಚುನಾವಣೆ ಎದುರಿಸುತ್ತೇವೆ'ಎಂದರು.
'ನಿಮ್ಮ ಜಗಳವನ್ನು ಮೊದಲು ಬಗೆಹರಿಸಿಕೊಳ್ಳಿ'
'ಮುಂದಿನ ಮುಖ್ಯಮಂತ್ರಿ ಯಾರು ಎಂದು ಕಾಂಗ್ರೆಸ್‌ನವರು ಬಹಿರಂಗವಾಗಿ ಹೇಳಲಿ. ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗೋದು ಸಂಪ್ರದಾಯ. ಸಿದ್ದರಾಮಯ್ಯರಾ? ಡಿಕೆಶಿಯಾ? ನಿಮ್ಮ ಜಗಳವನ್ನು ಮೊದಲು ಬಗೆಹರಿಸಿಕೊಳ್ಳಿ' ಎಂದರು.
ಸುರ್ಜೇವಾಲ ಬಗ್ಗೆ ಟೀಕೆ:
'ಬಿಟ್ ಕಾಯಿನ್ ಕಾಲ್ಪನಿಕ ವಿಚಾರ. ಜನಸಾಮಾನ್ಯರಲ್ಲಿ ಚರ್ಚೆ ಶುರುವಾಗಿದೆ. ಸುರ್ಜೇವಾಲ ದೆಹಲಿಯಲ್ಲಿ ಕುಳಿತು ಸುದ್ದಿಗೋಷ್ಟಿ ನಡೆಸುವ ಅಗತ್ಯ ಏನಿದೆ?. ಡಿಕೆಶಿ, ಸಿದ್ದು ಜಗಳ ಬಿಡಿಸಲು ವಿಫಲವಾಗಿ ಹೆಹಲಿಯಲ್ಲೇ ಸುದ್ದಿಗೋಷ್ಟಿ ನಡೆಸುತ್ತಾರೆ. ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ತೋರಿಸಲು ಸುದ್ದಿಗೋಷ್ಟಿ ನಡೆಸುತ್ತಾರೆ. ಗಾಳಿಯಲ್ಲಿ ಗುಂಡು ಹಾರಿಸೋದನ್ನು ಬಿಟ್ಟು, ನೇರವಾಗಿ ಕರ್ನಾಟಕಕ್ಕೆ ಬಂದು ಒಟ್ಟಾಗಿ ಪ್ರೆಸ್ ಮೀಟ್ ಮಾಡಿ' ಎಂದು ಟೀಕಿಸಿದರು.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ
'ಶ್ರೀಕಿ ಜೊತೆ ವ್ಯವಹಾರ ನಡೆಸೋದು ನಿಮ್ಮ ನಲಪಾಡ್ ಅವರು. ನಿಮ್ಮ ಶಾಸಕರ ಮಕ್ಕಳೇ ಶ್ರೀಕಿ ಜೊತೆ ವ್ಯವಹಾರ ಇಟ್ಟುಕೊಂಡಿರೋದು' ಎಂದು ಇದೇ ವೇಳೆ ಪ್ರತಾಪ್ ಸಿಂಹ್ ಆರೋಪಿಸಿದರು.