ಮೈಸೂರು: ಊರಿನ ಕೆರೆಯನ್ನು ಜಾನುವಾರುಗಳಿಗಾಗಿ ಮೀಸಲಿಟ್ಟು ಬೇಸಿಗೆ ಬಂದರೂ ನೀರಿನ ಸಮಸ್ಯೆ ಎದುರಾಗದಂತೆ ತಡೆದು ವರ್ಷಪೂರ್ತಿ ಮೂಕ ಪ್ರಾಣಿಗಳ ದಾಹವನ್ನು ತೀರಿಸುವ ಯೋಜನೆ ರೂಪಿಸಿರುವ ಜಿಲ್ಲೆಯ ಮೊಸಂಬಾಯನಹಳ್ಳಿ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಮೈಸೂರು ತಾಲೂಕಿನ ವರುಣ ಹೋಬಳಿಯ ಮೊಸಂಬಾಯನಹಳ್ಳಿಗೆ ಕಳೆದ ಎಂಟು ವರ್ಷಗಳ ಹಿಂದೆ ಭೀಕರ ಬರಗಾಲ ಎದುರಾಗಿತ್ತು. ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರಲ್ಲದೇ ಜಾನುವಾರುಗಳು ಕೂಡ ನೀರಿನ ಅಭಾವದಿಂದ ಕಂಗೆಟ್ಟಿದ್ದವು.
ಜನರೇನು ಬೇರೆ ಬೇರೆ ಕಡೆ ಹೋಗಿ ನೀರು ಕುಡಿಯಬಹುದು. ಆದರೆ ಜಾನುವಾರುಗಳ ಸ್ಥಿತಿ ಏನು ಎಂಬ ಆಲೋಚನೆಯಿಂದ ಗ್ರಾಮಸ್ಥರೆಲ್ಲರೂ ಸೇರಿ ತಮ್ಮೂರಿನ 'ಕೆರೆಯ ನೀರನ್ನು ಜಾನುವಾರಗಳ ಉಪಯೋಗಕ್ಕೆ ಬಿಟ್ಟು ಅನ್ಯ ಕಾರಣಗಳಿಗೆ ಬಳಸಿದರೆ ಪೊಲೀಸ್ ಮೊಕದ್ದಮೆ ಹಾಕಲಾಗುವುದು' ಎಂಬ ಪ್ರಕಟಣೆಯ ಫಲಕವನ್ನ ಪಿಡಿಒ ಮುಖಾಂತರ ಹಾಕಿಸಿದ್ದಾರೆ.
ಓದಿ-ಮೋದಿ ಕಾಲದಲ್ಲಿಯೂ ಧೂಳೆಬ್ಬಿಸುತ್ತಿವೆ ನೆಹರು ಜಮಾನದ ಬೈಕ್ಗಳು: ಉಡುಪಿ ಯುವಕನ ಬೈಕ್ ಕಲೆಕ್ಷನ್ಗೆ ಜನ ಫಿದಾ
ಅಂದಿನಿಂದ ಇಂದಿನವರೆಗೆ ಕೆರೆ ನೀರನ್ನು ಜಾನುವಾರುಗಳಿಗೆ ನೀರಿನ ದಾಹ ನೀಗಿಸಿಕೊಳ್ಳಲು ಮೀಸಲಿಡಲಾಗಿದೆ. ಮಳೆ ಬಂದಾಗ ಹಾಗೂ ವರುಣಾ ನಾಲೆ ತುಂಬಿ ಹರಿದಾಗ ಕೆರೆ ತುಂಬಿಕೊಳ್ಳುತ್ತದೆ. ಇದರಿಂದ ಬೇಸಿಗೆ ಬಂದರೂ ಕೆರೆ ನೀರು ಸಂಪೂರ್ಣವಾಗಿ ಬತ್ತಿ ಹೋಗುವುದಿಲ್ಲ. ಅಲ್ಲದೇ ಗ್ರಾಮಸ್ಥರು ಕೂಡ ಕೆರೆ ನೀರಿನ ಬಳಕೆ ಮಾಡುವುದು ಬಿಟ್ಟು ಮನೆ ಮನೆಗಳಿಗೆ ನಲ್ಲಿ ಹಾಕಿಸಿಕೊಂಡಿದ್ದಾರೆ.