ಮೈಸೂರು: ಕಳೆದ 24 ಗಂಟೆಗಳಿಂದ ನಡೆಯುತ್ತಿರುವ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆಯ ಎರಡನೇ ಪ್ರಾಶತ್ಯ ಮತದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ನಗರದ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಈಗ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯುತ್ತಿದೆ.
ಸದ್ಯ 8ಗಂಟೆಯವರೆಗಿನ ಮಾಹಿತಿ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ 35,228 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮೈ ವಿ ರವಿಶಂಕರ್ 28,356, ಜೆಡಿಎಸ್ ಅಭ್ಯರ್ಥಿ ರಾಮು 18,221 ಮತ್ತು ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್ ಗೌಡ 7,588 ಮತಗಳನ್ನು ಪಡೆದಿದ್ದಾರೆ. ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಮುಂದುವರೆದಿದ್ದು, ಇಂದು 12 ಗಂಟೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಈಗಿರುವ ಮಾಹಿತಿಯ ಪ್ರಕಾರ ಸದ್ಯ 6, 872 ಮತಗಳಿಂದ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.
ಪಕ್ಷೇತರ ಅಭ್ಯರ್ಥಿ ಔಟ್: ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಅವರನ್ನ ಎಲಿಮಿನೇಟ್ ಮಾಡಲಾಗಿದೆ. ಇಂದು ಬೆಳಗ್ಗೆ 7:50 ಕ್ಕೆ ಪಕ್ಷೇತರ ಅಭ್ಯರ್ಥಿ ವಿನಯ್ ಅವರನ್ನ ಎಲಿಮಿನೇಟ್ ಮಾಡಲಾಗಿದೆ.
(ಇದನ್ನೂ ಓದಿ: ಹಣಮಂತ ನಿರಾಣಿಗೆ ಸತತ ಎರಡನೇ ಬಾರಿ ಜಯ: 34 ಸಾವಿರ ಮತಗಳ ಅಂತರದಿಂದ ಕೈ ಅಭ್ಯರ್ಥಿಗೆ ಹೀನಾಯ ಸೋಲು)