ವಿಶ್ವನಾಥ್ ಪುತ್ರನ ಆಪ್ತನಿಂದ ಜೀವ ಬೆದರಿಕೆ: ಹೆಚ್.ಪಿ.ಮಂಜುನಾಥ್ ಗಂಭೀರ ಆರೋಪ - life threat
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಅವರ ಆಪ್ತನಿಂದ ಜೀವ ಬೆದರಿಕೆ ಇದೆ ಎಂದು ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರು: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಅವರ ಆಪ್ತನಿಂದ ಜೀವ ಬೆದರಿಕೆ ಇದೆ ಎಂದು ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ್, ನಿವೇಶನ ವಿಚಾರವಾಗಿ ರಮೇಶ್ ಎಂಬಾತ ತನ್ನ ವಾಟ್ಸಪ್ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ್ ಕಳುಹಿಸಿದ್ದು, ಶಾಸಕ ಹೆಚ್.ಪಿ.ಮಂಜುನಾಥ್ ಅವರಿಗೆ ಹೊಡೆದರೆ ನಾನು ಹಾಗೂ ಅಮಿತ್ ಇದೀವಿ. ಜೈಲಿನಿಂದ ಬಿಡಿಸಿಕೊಂಡು ಬರ್ತೀವಿ ಅಂತ ಹೇಳಿದ್ದಾರೆ. ಹೀಗಾದರೆ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವೇ ಎಂದು ಪ್ರಶ್ನಿಸಿದರು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಮಂಜುನಾಥ್ಗೆ ವಿಶ್ವನಾಥ್ ತಿರುಗೇಟು:
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೆಚ್.ವಿಶ್ವನಾಥ್, ಸ್ಥಳದಲ್ಲಿಯೇ ಪುತ್ರನಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ತಮ್ಮ ವೈಫಲ್ಯ ಮರೆಮಾಚಲು ಮಂಜುನಾಥ್ ಯತ್ನಿಸುತ್ತಿದ್ದು, ಇಂತಹ ಆರೋಪ ಮಾಡುತ್ತಿದ್ದಾರೆ. ನಾನು ವಿಧಾನ ಪರಿಷತ್ ಸದಸ್ಯನಾಗಿರುವುದನ್ನು ಸಹಿಸಲಾಗದೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.