ಮೈಸೂರು : ರಾಜ್ಯ ಸರ್ಕಾರದಿಂದ 12 ಸಾವಿರ, ಕೇಂದ್ರ ಸರ್ಕಾರದಿಂದ 3 ಸಾವಿರ ಸೇರಿ ಒಟ್ಟು 15 ಸಾವಿರ ನೋಂದಣಿ ಆಗಲಿದೆ ಎಂಬ ಮಾಹಿತಿ ಇದೆ. ಆದರೆ, ಸದ್ಯಕ್ಕೆ ಯಾವುದು ಅಂತಿಮವಾಗಿಲ್ಲ. ಮುಖ್ಯಮಂತ್ರಿಗಳು ಜೂನ್ 8ಕ್ಕೆ ಬರಲಿದೆ. ಅಂದು ಯೋಗ ದಿನಾಚರಣೆಗೆ ಭಾಗಿಯಾಗುವವರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಮಾಹಿತಿ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಮೈಸೂರಿಗೆ ಆಗಮಿಸುತ್ತಿರುವುದರಿಂದ ಜೂನ್ 5 ಮತ್ತು 12ರಂದು ಯೋಗ ತಾಲೀಮು ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದರ ಬಗ್ಗೆ ಜೂನ್ 12ರ ನಂತರ ತೀರ್ಮಾನ ಮಾಡಲಾಗುವುದು ಎಂದರು.
ಸರ್ಕಾರಿ, ಖಾಸಗಿ, ವಿಶೇಷ ಚೇತನರು ಸೇರಿದಂತೆ ಯೋಗ ಮಾಡುವ ಎಲ್ಲರಿಗೂ ಅವಕಾಶ ನೀಡಲಾಗುವುದು. ಕಾರ್ಯಕ್ರಮಕ್ಕೆ ನೋಂದಣಿ ಆರಂಭವಾಗಿಲ್ಲ. ನೋಂದಣಿ ಸಂಬಂಧ ನಿರ್ದೇಶಕರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳು ಜೂನ್ 8ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಅಂದು ಕಾರ್ಯಕ್ರಮದ ರೂಪುರೇಷೆ ಅಂತಿಮವಾಗಲಿದೆ ಎಂದರು.
ಮೊದಲ ಹಂತದ ಯೋಗಾಭ್ಯಾಸ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗಾಭ್ಯಾಸ ಮಾಡಲಾಯಿತು. ಅರಮನೆಯ ಮುಂಭಾಗ ಯೋಗ ತಾಲೀಮಿಗೆ ಶ್ರೀ ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಚಾಲನೆ ನೀಡಿದರು. ಮೈಸೂರಿನ ಹಲವು ಯೋಗ ಸಂಸ್ಥೆಗಳ ಯೋಗ ಪಟುಗಳು, ಪ್ರೊ. ಭಾಷ್ಯಂ ಸ್ವಾಮೀಜಿ, ಶಾಸಕ ಎಸ್ ಎ ರಾಮದಾಸ್, ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು. ಮೋದಿ ಆಗಮನದ ದಿನ 15 ಸಾವಿರ ಮಂದಿಯಿಂದ ಯೋಗ ಪ್ರದರ್ಶನ ನಡೆಯಲಿದೆ.