ಮೈಸೂರು : ರಾಜ್ಯ ಸರ್ಕಾರ ರೈತರ ಪರವಿದೆ. ರೈತರ ಸಂಕಷ್ಟಕ್ಕೆ ಸದಾ ನೆರವಾಗುತ್ತಿದೆ. ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲ ಪಡೆದವರ ಕುಟುಂಬದವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಅಂಥವರ ಸಾಲ ಮನ್ನಾ ಮಾಡುವ ಚಿಂತನೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿರುವವರು ಕೋವಿಡ್‌ನಿಂದ ಮೃತಪಟ್ಟಿದ್ದರೆ ಅಂಥವರ ಪಟ್ಟಿ ಹಾಗೂ ಸಾಲ ವಿವರವನ್ನು ಕೊಡುವಂತೆ ಈಗಾಗಲೇ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಎಂಡಿಗಳಿಗೆ ನಾನು ಸೂಚನೆ ನೀಡಿದ್ದೇನೆ. ಶೀಘ್ರದಲ್ಲಿಯೇ ವಿವರಗಳನ್ನು ಪಡೆದು ಕಾರ್ಯಕ್ರಮವನ್ನು ಆಯೋಜಿಸಿ ಸಾಲಮನ್ನಾವನ್ನು ಘೋಷಿಸಲಾಗುವುದು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂಪಾಯಿ ಬೆಳೆ ಸಾಲ ನೀಡುವಂತೆ ಮುಖ್ಯಮಂತ್ರಿಗಳು ಗುರಿ ನಿಗದಿಪಡಿಸಿದ್ದು, ಕಳೆದ ವರ್ಷದಂತೆ ಶೇ.100ರಷ್ಟು ಗುರಿಯನ್ನು ಮೀರಿ ಸಾಲ ವಿತರಣೆ ಮಾಡಬೇಕೆಂಬ ಸೂಚನೆ ನೀಡಲಾಗಿದೆ ಎಂದರು.
ಕಳೆದ ವರ್ಷ ಸಾಲ ನೀಡಿಕೆ ಗುರಿಯನ್ನು ಮೀರಿ ಹೇಗೆ ಶೇ.114ರಷ್ಟು ಬೆಳೆಸಾಲವನ್ನು ನೀಡಲಾಗಿದೆಯೋ ಹಾಗೆಯೇ ಈ ಬಾರಿಯೂ ಸಹಕಾರ ಇಲಾಖೆ ಸಾಧನೆ ಮಾಡಲಿ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದರಂತೆ ಈಚೆಗೆ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ವಿಭಾಗದ ಡಿಸಿಸಿ ಬ್ಯಾಂಕ್ ವತಿಯಿಂದ ಕಾರ್ಯಕ್ರಮ ನಡೆಸಿ, ಪ್ರಸಕ್ತ ಸಾಲಿನ ಸಾಲ ನೀಡಿಕೆ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಮೈಸೂರಿನಲ್ಲಿ ಈಗ 2ನೇ ಹಂತದ ಕಾರ್ಯಕ್ರಮಕ್ಕೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ನಾಳೆ ಕೊಡಗಿನಲ್ಲಿ ಸಾಲ ಹೂಡಿಕೆಗೆ ಚಾಲನೆ..
ನಾಳೆ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಅಲ್ಲಿ ಸಾಲ ನೀಡಿಕೆಗೆ ಚಾಲನೆ ಕೊಡಲಿದ್ದೇನೆ. ಹೀಗೆ 21 ಡಿಸಿಸಿ ಬ್ಯಾಂಕ್‌ಗಳಿಗೂ ಭೇಟಿ ನೀಡಿ ಸಾಲ ನೀಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲು ನಾನು ಪ್ರಾಮಾಣಿಕವಾಗಿ ಬದ್ಧನಿದ್ದೇನೆ. ಸಹಕಾರ ಸಚಿವನಾಗಿ ಇದರ ಎಲ್ಲ ಕಾರ್ಯಗಳ ಮೇಲೆ ನಿಗಾವಹಿಸಿ, ಸೂಕ್ತ ಮಾರ್ಗದರ್ಶನವನ್ನು ನೀಡುವ ಮುಖಾಂತರ ನಾನು ಕ್ರಮವಹಿಸುತ್ತೇನೆ ಎಂದು ಹೇಳಿದರು.
ಕಳೆದ ವರ್ಷ ಶೇ.114 ಸಾಧನೆ
ಕಳೆದ ವರ್ಷ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆಸಾಲವನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ 21 ಡಿಸಿಸಿ ಬ್ಯಾಂಕ್ಗಳು ಉತ್ತಮ ಸಾಧನೆ ಮಾಡಿದ್ದು, 17,108 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡುವ ಮೂಲಕ ಶೇ.114 ಸಾಧನೆ ಮಾಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'ಎಲ್ಲಾರು ವಾಂಗಾ.. ಆಲ್ವೇಸ್ ವೆಲ್‌ಕಂಸ್ ಯೂ'..: The Village cooking Channelಗೆ 1 ಕೋಟಿ ಚಂದಾದಾರರು!
ಕೋವಿಡ್ ಸಂದರ್ಭ ಸಹಿತ ಲಾಕ್ಡೌನ್ ಇದ್ದರೂ ಸಹ ಸಾಲ ಪಡೆದವರು ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿ ಮಾಡುತ್ತಿದ್ದಾರೆ. ಈ ಮೂಲಕ ಕಳೆದ ವರ್ಷ ಶೇ.95ರಷ್ಟು ಸಾಲದ ಮರು ಪಾವತಿಯಾಗಿದೆ. ರೈತರು ತಮ್ಮ ಪ್ರಾಮಾಣಿಕತನವನ್ನು ಉಳಿಸಿಕೊಂಡಿದ್ದಾರೆಂದು ಶ್ಲಾಘಿಸಿದರು.
ಡಿಸಿಸಿ ಬ್ಯಾಂಕ್‌ಗಳಲ್ಲಿನ ಅಕ್ರಮಗಳ ಮೇಲೆ ಕ್ರಮ
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಾಗೂ ಗುಲ್ಬರ್ಗ ಡಿಸಿಸಿ ಬ್ಯಾಂಕ್‌ಗಳಲ್ಲಿನ ಅಕ್ರಮಗಳ ಮೇಲೆ ಕ್ರಮಕೈಗೊಂಡಿದ್ದು, ಅಲ್ಲಿಯೂ ಸಹ ಸೂಕ್ತ ಕ್ರಮವಹಿಸಿ ಸಾಲ ನೀಡಿಕೆಗೆ ಚಾಲನೆ ನೀಡಲಾಗುವುದು. ಜೊತೆಗೆ ಗುಲ್ಬರ್ಗ ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್‌ಗೆ ಬಾಕಿ ಇರುವ ಹಣವನ್ನು ತುಂಬಿದ್ದಲ್ಲದೆ, ಈ ಬಾರಿ ಸುಮಾರು 50 ಕೋಟಿ ರೂಪಾಯಿಯಷ್ಟು ಸಾಲವನ್ನು ನೀಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗುತ್ತಿದೆ.
ಹೀಗಾಗಿ, ಲಾಭದಲ್ಲಿರುವ 21 ಡಿಸಿಸಿ ಬ್ಯಾಂಕ್‌ಗಳ ಮೂಲಕ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಾಲವನ್ನು ಕೊಡುತ್ತೇವೆ ಜೊತೆಗೆ ಸಾಲ ವಸೂಲಿಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ, ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಗೌಡ ಅವರು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಡಿಸಿಸಿ ಬ್ಯಾಂಕ್ ಅನ್ನು ಲಾಭದಲ್ಲಿ ಕೊಂಡೊಯ್ಯುತ್ತಿದ್ದಾರೆ. ಹೀಗೆ ಮುಂದುವರಿಸಿಕೊಂಡು ಹೋಗಬೇಕೆಂದು ಸಚಿವರು ಸಲಹೆ ಮಾಡಿದರು.