ಮೈಸೂರು: ಶಾಸಕ ಜಿ.ಟಿ.ದೇವೇಗೌಡರು ನಮ್ಮ ಪಕ್ಷಕ್ಕೆ ಬರಬೇಕೆಂಬುದು ನಮ್ಮ ಆಸೆ ಎಂದು ಮೈಸೂರಿನಲ್ಲಿ ಸೋಮವಾರದಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು. ಸಚಿವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಅವರಣಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಹಳೇ ಮೈಸೂರು ಭಾಗದಲ್ಲಿ ಬೇರೆ ಬೇರೆ ಪಕ್ಷದವರು ಬಿಜೆಪಿಗೆ ಬರುವ ಸಾಧ್ಯತೆ ಇದೆ. ನಮ್ಮ ಪಕ್ಷದ ಸಿದ್ಧಾಂತವನ್ನು ನಂಬಿ ಬರುತ್ತಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಿಜೆಪಿಗೆ ಬರಲಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜಿ.ಟಿ ದೇವೇಗೌಡರು ಈ ಭಾಗದ ನಾಯಕರು. ಅವರು ಪಕ್ಷಕ್ಕೆ ಬರಬೇಕು ಎಂಬುದು ನಮ್ಮ ಆಸೆ. ಅವರ ಮಗನಿಗೆ ಟಿಕೆಟ್ ನೀಡುವುದನ್ನು ಪಕ್ಷ ನೋಡಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಫ್ಯಾಟ್ ಸರ್ಜರಿ ವೇಳೆ ನಟಿ ಸಾವು
ಕರಾವಳಿ ಭಾಗದಲ್ಲಿ ಹಿಂದೂಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಈ ರೀತಿ ಮಾಡಲು ಸಾಧ್ಯವಿದೆಯಾ? ಅದೆಲ್ಲ ಸುಳ್ಳು ಎಂದರು. ಬಸವರಾಜ ಹೊರಟ್ಟಿ ಈಗ ತಾನೇ ಪಕ್ಷಕ್ಕೆ ಬಂದಿದ್ದಾರೆ. ಚುನಾವಣೆ ಸ್ಪರ್ಧೆ ಮಾಡಿದ ನಂತರ ಸಚಿವರಾಗುವುದನ್ನು ಪಕ್ಷ ನಿರ್ಧರಿಸುತ್ತದೆ ಎಂದರು.