ಮೈಸೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರವಾಸಿ ನಗರಿಯ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಜೀವ ಬಾಂಬ್ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಾದ ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚರ್ಚ್ ಹಾಗೂ ಅರಮನೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅನುಮಾನಾಸ್ಪದ ವಸ್ತುಗಳು ಅಥವಾ ಬ್ಯಾಗ್ಗಳು ಕಂಡುಬಂದರೆ ಕೂಡಲೇ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಅಣಕು ಪ್ರದರ್ಶನ:
ಭಯೋತ್ಪಾದಕ ದಾಳಿ ನಡೆದಾಗ ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಎಂಬ ಬಗ್ಗೆ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ 4 ತಂಡ ಸೋಮವಾರ ರಾತ್ರಿ ಅರಮನೆ ಆವರಣದಲ್ಲಿ ಅಣಕು ಪ್ರದರ್ಶನ ನಡೆಸಿತು. ಇದೇ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಭಾನುವಾರ ಇನ್ಫೋಸಿಸ್ ಹಾಗೂ ವಿಪ್ರೋಗಳಲ್ಲೂ ಅಣಕು ಪ್ರದರ್ಶನ ನಡೆಸಿದರು.