ಮೈಸೂರು: ರಾಷ್ಟ್ರೀಯ ಲೋಕ ಅದಾಲತ್‌ನ ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ತಾಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 27 ದಂಪತಿ ತಮ್ಮ ನಡುವಿನ ಕಲಹ ಮರೆತು ಲೋಕ ಅದಾಲತ್ ತೀರ್ಮಾನದಂತೆ ಜೊತೆಯಾಗಿ ಬಾಳುವುದಾಗಿ ಒಪ್ಪಿದ್ದಾರೆ.
ಮೈಸೂರು ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 1,15,893 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 50,811 ಪ್ರಕರಣಗಳು ರಾಜಿಯಾಗಬಲ್ಲ ಪ್ರಕರಣಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ ಇಲ್ಲಿಯವರೆಗೆ 33,551 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಾಲಯದಲ್ಲಿ ಬಾಕಿರುವ ಪ್ರಕರಣಗಳಲ್ಲಿ ರಾಜಿ ಸಂಧಾನಕ್ಕಾಗಿ ಗುರುತಿಸಲಾದ 33,551 ಪ್ರಕರಣಗಳ ಪೈಕಿ 18,705 ಪ್ರಕರಣಗಳನ್ನು ಹಾಗೂ 38,843 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಅಂದರೆ ಒಟ್ಟಾರೆ 57,548 ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ.
ಈ ಬಾರಿಯ ಲೋಕ ಅದಾಲತ್‌ನಲ್ಲಿ ವಿಶೇಷವಾಗಿ ಸಂಚಾರ ಉಲ್ಲಂಘನೆ ಸಂಬಂಧಿಸಿದ ಪ್ರಕರಣಗಳಲ್ಲಿ 31,964 ಪ್ರಕರಣಗಳು ವಿಲೇವಾರಿಯಾಗಿದ್ದು 1,76,18,200 ರೂ. ಸ್ವೀಕೃತವಾಗಿರುತ್ತದೆ. ಮೆಗಾ ಲೋಕ ಅದಾಲತ್‌ನಲ್ಲಿ ತೀರ್ಮಾನವಾದ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಒಟ್ಟು 42,37,99,068 ರೂ.ಗಳನ್ನು ಪರಿಹಾರ ನೀಡಲು ಆದೇಶಿಸಲಾಗಿದೆ.
ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಕಕ್ಷಿದಾರರಿಗೆ ಮತ್ತು ಜನಸಾಮಾನ್ಯರಿಗೆ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಅನುಕೂಲ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ವಿಚ್ಛೇದನಕ್ಕೆ ಬಂದಿದ್ದ ಮೂರು ಜೋಡಿ ಒಂದುಗೂಡಿಸಿದ ಲೋಕ ಅದಾಲತ್.. ಸಿಹಿ ತಿನಿಸಿ ನಗು ಬೀರಿದ ದಂಪತಿಗಳು