ಮೈಸೂರು : ನಾಡಹಬ್ಬ ದಸರಾ ಮಹೋತ್ಸವವನ್ನು ರಾಜ್ಯ ಸರ್ಕಾರ ಈ ಸಾರಿ ಸರಳವಾಗಿ ಆಚರಿಸಲು ನಿರ್ಧರಿಸಿದೆ. ಸರಳವಾಗಿ ಕಾರ್ಯಕ್ರಮ ನಡೆದರೂ ಪರವಾಗಿಲ್ಲ. ಆದರೆ, ಸ್ಥಳೀಯ ವಿವಿಧ ಕಲಾವಿದರಿಗೆ ಅವಕಾಶ ನೀಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.
ಹೌದು, ದಸರಾ ಮಹೋತ್ಸವದ ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದವರಿಗೆ ಆಹ್ವಾನ ನೀಡಲು ನಿರ್ಧರಿಸುವಂತೆ, ಸ್ಥಳೀಯ ಜಾನಪದ ಕಲಾವಿದರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂಬ ಮಾತು ಹೇಳಿ ಬರುತ್ತಿದೆ.
ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂಬ ಪಟ್ಟ ಬಂದಿದ್ದೇ ಸ್ಥಳೀಯ ಕಲಾವಿದರಿಂದ. ಇವರಿಗೆ ಪ್ರಾಮುಖ್ಯತೆ ನೀಡಲಾಗಿಲ್ಲ. ಬೇರೆ ಬೇರೆ ಕಲಾವಿದರಿಗೆ ಲಕ್ಷ ಲಕ್ಷ ಸಂಭಾವನೆ ನೀಡುತ್ತೀರಿ, ಸ್ಥಳೀಯ ಕಲಾವಿದರಿಗೆ ತಂಡವೊಂದಕ್ಕೆ ಕೇವಲ 20 ಸಾವಿರ ರೂ. ನೀಡುತ್ತೀರಿ. ಇದು ಯಾವ ನ್ಯಾಯ? ಮುಖ್ಯಮಂತ್ರಿಗಳೇ ನಮಗೆ ಸಂಭಾವನೆಗಿಂತ ದಸರಾ ಉತ್ಸವದಲ್ಲಿ ಭಾಗಿಯಾಗುವುದೆ ಮುಖ್ಯ ಎಂದು ಇಲ್ಲಿನ ಕಲಾವಿದರು ತಮ್ಮ ನೋವು ಹಾರಹಾಕಿದ್ದಾರೆ.
ಕಳೆದ 6 ತಿಂಗಳಿಂದ ಕಲಾವಿದರಿಗೆ ಯಾವುದೇ ಆದಾಯಲ್ಲ, ಬರುವ ದಸರಾದಲ್ಲಾದರೂ ಕಾರ್ಯಕ್ರಮ ಸಿಗುವ ಭರವಸೆ ಇತ್ತು. ಸರಳ ದಸರಾ ಹಿನ್ನೆಲೆಯಲ್ಲಿ ಆ ಭರವಸೆ ಸಹ ಇದೀಗ ಕಳೆದುಹೋಗಿದೆ. ಸಂಭಾವನೆಗಿಂತಲೂ ಹೆಚ್ಚಾಗಿ ಸಭಿಕರ ಚಪ್ಪಾಳೆಯೇ ನಮಗೆ ಸ್ಫೂರ್ತಿ. ಸಭಿಕರ ಪ್ರೋತ್ಸಾಹವೇ ಜೀವನಕ್ಕೆ ಶಕ್ತಿ. ಹಾಗಾಗಿ ನಮಗೆ ಅವಕಾಶ ಮಾಡಿಕೊಡಬೇಕೆಂದು ಕಂಸಾಳೆ ಬಾರಿಸುವ ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.