ಮೈಸೂರು : ಕಳೆದ 3 ದಿನಗಳ ಹಿಂದೆ ಪಾಳು ಬಾವಿಗೆ ಬಿದ್ದಿದ್ದ ಚಿರತೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಶನಿವಾರ ಹೆಚ್‌ಡಿಕೋಟೆ ತಾಲೂಕಿನ ಕಾರಾಪುರ ಬಳಿಯ ಮನೆಯೊಂದರ ಹಿಂಭಾಗದಲ್ಲಿದ್ದ ಪಾಳು ಬಾವಿಯಲ್ಲಿ ಚಿರತೆ ಬಿದ್ದಿರುವುದಾಗಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಶನಿವಾರ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಚಿರತೆ ಪತ್ತೆಯಾಗಿರಲಿಲ್ಲ. ಭಾನುವಾರ ಮತ್ತೆ ಕಾರ್ಯಾಚರಣೆ ಮುಂದುವರೆಸಿದ ಅರಣ್ಯ ಅಧಿಕಾರಿಗಳು, ಬೋನಿನ ಒಳಗೆ ಒಬ್ಬ ಅಧಿಕಾರಿಯನ್ನು ಕೂರಿಸಿ ಹಗ್ಗದ ಸಹಾಯದಿಂದ ಬೋನನ್ನು 100 ಅಡಿ ಬಾವಿಯೊಳಗೆ ಬಿಟ್ಟು ಪರೀಕ್ಷೆ ನಡೆಸಿದ್ದಾರೆ. ಆಗಲೂ ಕೂಡ ಚಿರತೆ ಪತ್ತೆಯಾಗಿರಲಿಲ್ಲ. ಆದರೂ ಗ್ರಾಮಸ್ಥರು ಚಿರತೆ ಬಾವಿಯೊಳಗಿರುವ ಕೊರಕಲು ಗುಹೆಯೊಳಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಹೀಗಾಗಿ ಅರಣ್ಯ ಇಲಾಖೆಯವರು ಇಂದು ಹೆಚ್ಚುವರಿ ಸಿಬ್ಬಂದಿಯೊಂದಿಗೆ ಸಿಸಿಟಿವಿ ಸಹಾಯದಿಂದ ಚಿರತೆ ಇರುವುದನ್ನು ಪತ್ತೆ ಹಚ್ಚಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.