ಮೈಸೂರು: ಕೊರೊನಾಗೆ ಔಷಧಿ ಎಂದು ಹೇಳಿಕೊಂಡು ಬಾಬಾ ರಾಮ್ದೇವ್ ಈ ದೇಶದ ಜನರನ್ನು ಮೂರ್ಖರಾನ್ನಾಗಿ ಮಾಡಿ, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ್ದೇವ್ ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಕೊರೊನಾ ಕಿಟ್ ಮಾರಲು ಹೊರಟಿದ್ದಾರೆ. ನಾನು ಈ ಔಷಧಿಯನ್ನು ಮೈಸೂರಿನಲ್ಲಿ 800 ರೂಪಾಯಿ ಕೊಟ್ಟು ಪಡೆದಿದ್ದೇನೆ. ಬಾಬಾ ರಾಮ್ದೇವ್ ಜನರನ್ನ ಮೂರ್ಖರಾನ್ನಾಗಿ ಮಾಡುತ್ತಿದ್ದು, ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾನೆ. ಆತ ಬಿಜೆಪಿಯ ಏಜೆಂಟ್ ಎಂದು ಕಿಡಿ ಕಾರಿದರು.
ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿರುವ ದರ ಕೇಳಿದರೆ ಹೃದಯಾಘಾತವಾಗುತ್ತದೆ. ಬಿಜೆಪಿ ಸರ್ಕಾರ ಜನರ ಜೀವ ತೆಗೆಯಲು ಬಂದಂತಿದೆ. ಖಾಸಗಿ ಆಸ್ಪತ್ರೆ ಜೊತೆಗೆ ಬಿಜೆಪಿ ಶಾಮೀಲಾಗಿರುವ ಶಂಕೆಯಿದೆ. ಹೀಗಾಗಿ ಕೊರೊನಾ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿದಿನ ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರುತ್ತಿದೆ. ಇದು ಮೋದಿಯವರ ಸಾಧನೆ. ಚೀನಾದ ಒಂದು ಲಕ್ಷ ಜನರು ಪಿಎಂ ಕೇರ್ಗೆ ಹಣ ನೀಡಿದ್ದು, ಚೀನಿ ದೇಶದವರು ದೇಣಿಗೆ ನೀಡಿರುವುದರ ಕುರಿತು ಶೀಘ್ರವೇ ದಾಖಲೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.