ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವುದು ಪಕ್ಷದ ಸದಸ್ಯರ ಇಚ್ಛೆಯಾಗಿದೆ ಎಂದು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ.
ನಗರ ಪಾಲಿಕೆಯ ವಲಯ ಕಚೇರಿ-9ರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಅದು ಕಾಂಗ್ರೆಸ್ ಜೊತೆ ಮಾತ್ರ. ಮೇಯರ್ ಸ್ಥಾನ ಕೂಡ ಕಾಂಗ್ರೆಸ್ಗೆ ನೀಡುತ್ತೇವೆ. ಬಿಜೆಪಿ ಜೊತೆ ಮೈತ್ರಿ ಇಲ್ಲ. ಉಪಚುನಾವಣೆ ಇರುವುದರಿಂದ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ ಎಂದರು.
ನಾವು ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ಗೆ ಮೇಯರ್ ಸ್ಥಾನ. ಆದರೆ, ಉಪ ಚುನಾವಣೆ ಇದೆ. ಅಲ್ಲಿ ಮೈತ್ರಿ ಮಾಡಿಕೊಂಡರೆ ಉಪ ಚುನಾವಣೆಯಲ್ಲಿ ಅವರ ವಿರುದ್ಧವೇ ಹೋರಾಡಬೇಕು. ಹಾಗಾಗಿ, ವಿರೋಧ ಪಕ್ಷದಲ್ಲಿ ಕುಳಿತರೂ ಪರವಾಗಿಲ್ಲ. ನಾವು ಮೇಯರ್ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಅಂತಾ ಕೆಲ ಪಾಲಿಕೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಮೇಯರ್ ಚುನಾವಣೆಯ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ನಾಳೆ ಸಂಜೆ ಅಂತಿಮ ನಿರ್ಧಾರ ಮಾಡುತ್ತೇವೆ. ನಮ್ಮ ನಾಯಕರ ಸೂಚನೆ ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ವರಿಷ್ಠರ ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.