ಮೈಸೂರು: ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅನುಮತಿ ಪಡೆಯದೇ ಏಕಾಏಕಿ ಕಚೇರಿಗೆ ನುಗ್ಗಿ ದಿಗ್ಬಂಧನ ಹಾಕಿದ ರೈತ ಸಂಘದ ಮುಖಂಡರ ವಿರುದ್ಧ ನಂಜನಗೂಡಿನ ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೈತ ಮುಖಂಡ ಶಿರಮಳ್ಳಿ ಸಿದ್ದಪ್ಪ, ಪ್ರಕಾಶ್ ಸೇರಿದಂತೆ ಇನ್ನಿತರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ನಂಜನಗೂಡು ವೃತ್ತ ನಿರೀಕ್ಷಕರಿಗೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ದೂರು ನೀಡಿದ್ದಾರೆ.
ಶ್ರೀನಿವಾಸ್ ಹೇಳಿದ್ದು ಹೀಗೆ..
ನಂಜನಗೂಡಿನ ರೈತ ಸಂಘಟನೆಯವರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಗ್ರಾಮವೊಂದರಲ್ಲಿ ಸ್ವಚ್ಚತೆ ಹಾಗೂ ಕುಡಿವ ನೀರಿನ ಸಮಸ್ಯೆ ಇರುವುದಾಗಿ ಮನವಿ ಸಲ್ಲಿಸಿದ್ದು, ಅದರಂತೆ ಪ್ರಧಾನ ಕಾರ್ಯದರ್ಶಿ ಅವರು ಸಿಇಒ ಹಾಗೂ ನನಗೆ ನಿತ್ಯ ಇಂತಿಷ್ಟು ಪಂಚಾಯಿತಿಗಳಿಗೆ ಭೇಟಿ ನೀಡಿ, ಸ್ವಚ್ಚತೆ ಹಾಗೂ ಕುಡಿವ ನೀರಿನ ಸಮಸ್ಯೆ ಪರಿಹರಿಸುವಂತೆ ನಮಗೆ ಸೂಚಿಸಿದ್ದರು.
ಅದರ ಮೇರೆಗೆ ಹಾಡ್ಯ ಗ್ರಾಮದಲ್ಲಿ 7 ವರ್ಷದಿಂದ ಸ್ವಚ್ಚಗೊಳ್ಳದ ಗುಂಡಿಯೊಂದಕ್ಕೆ ಚರಂಡಿ ನೀರು ಸೇರಿ ಗಬ್ಬು ನಾರುತ್ತಿರುವ ವಿಚಾರ ಕೇಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಡ್ರೈನೇಜ್ ಮಾಡುವಂತೆ ಸೂಚಿಸಿದ್ದೆ. ಈ ವೇಳೆ, ರೈತ ಸಂಘದವರು ಸ್ಥಳದಲ್ಲಿ ಪ್ರತಿಭಟಿಸಿ, ಅದಕ್ಕೆ ನೀವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ ನಂಜನಗೂಡಿನ ತಾಲೂಕು ಕಚೇರಿಗೆ ಯಾವುದೇ ಪೂರ್ವಾನುಮತಿ ಪಡೆಯದೇ ಏಕಾಏಕಿ ಕಚೇರಿಗೆ ನುಗ್ಗಿ ನನಗೆ ಕಚೇರಿಯೊಳಗೆ ದಿಗ್ಬಂಧನ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ತಾಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ನಂಜನಗೂಡು ಪಟ್ಟಣ ಠಾಣೆಗೆ ರೈತ ಸಂಘದ ಮುಖಂಡರ ವಿರುದ್ಧ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?:
ಜಿಲ್ಲಾಧಿಕಾರಿ ಕರೆದ ಸಭೆಗೆ ಹೋಗಲು ಹೋದ ಸಂದರ್ಭದಲ್ಲಿ ಕಚೇರಿಯ ಬಾಗಿಲಲ್ಲಿ ಕೆಲವರು ನನ್ನನ್ನು ಅಡ್ಡಗಟ್ಟಿ ಹೊರಗೆ ಬರಲು ಅವಕಾಶ ನೀಡದೆ, ಏಕವಚನದಲ್ಲಿ ಮಾತನಾಡಿದ್ದು, ಜನಾಂಗೀಯ ನಿಂದನೆ ಮಾಡಿದ್ದು, ದೌರ್ಜನ್ಯ ಎಸಗಿದ್ದಾರೆ. ಪ್ರತಿಭಟನೆ ನಡೆಸುವ ಕುರಿತು ಪೂರ್ವಾನುಮತಿ ಮಾಹಿತಿ ನೀಡದೆ ಏಕಾಏಕಿ ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಶ್ರೀನಿವಾಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆ.. ದ್ರಾಕ್ಷಿ ಬೆಳೆಗೆ ಬೂದಿ ರೋಗ: ಕಂಗಾಲಾದ ರೈತ