ಮೈಸೂರು : ಸಿನಿಮಾ ರಂಗಕ್ಕೆ ನಾಯಕತ್ವದ ಅವಶ್ಯಕತೆ ಇದೆ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಾಯಕತ್ವ ವಹಿಸಿಕೊಳ್ಳಬೇಕು. ಅವರ ಮಾರ್ಗದರ್ಶನದಡಿ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳೊಂದಿಗೆ ಬೆಳಗಾವಿಯಲ್ಲಿ ನಡೆದ ಕನ್ನಡಪರ ಹೋರಾಟ ವಿಚಾರವಾಗಿ ಮಾತನಾಡಿ, ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು. ಬೆಳಗಾವಿಗೆ ಹೋಗಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.
Indrajit Lankesh speaks on actor Shivarajkumar leadership : ಸಿನಿಮಾ ರಂಗದಲ್ಲಿ ನಾಯಕತ್ವದ ಕೊರತೆ ಇದೆ. ಡಾ. ರಾಜಕುಮಾರ್ ಅವರ ನಂತರ ಅಂಬರೀಶ್ ಅವರು ನಾಯಕತ್ವ ವಹಿಸಿದ್ದರು. ಆದರೆ, ಈಗ ಯಾರೂ ಇಲ್ಲ. ಕನ್ನಡ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ದುಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಶಿವರಾಜ್ ಕುಮಾರ್ ನಾಯಕತ್ವ ವಹಿಸಿಕೊಂಡರೆ ಬೆಂಬಲ ಕೊಡುತ್ತೀನಿ ಎಂದು ತಿಳಿಸಿದರು.
ನಾನು ಟ್ವಿಟರ್ ಹೋರಾಟದ ವಿರೋಧಿ. ನಾನು ಸಹ ಬೆಳಗಾವಿಗೆ ಹೋಗುತ್ತೇನೆ. ಹಿಂದೆ ಗೋಕಾಕ್ ಚಳವಳಿಗೆ ಡಾ. ರಾಜ್‌ಕುಮಾರ್ ಅವರನ್ನು ಕರೆ ತಂದಿದ್ದು, ನಮ್ಮ ತಂದೆ ಲಂಕೇಶ್. ಡಾ. ರಾಜ್ ಅನುಮತಿ ಇಲ್ಲದೆ ಗೋಕಾಕ್ ಹೋರಾಟಕ್ಕೆ ರಾಜ್ ಅಂತಾ ಲೇಖನ ಬರೆದಿದ್ದರು. ನಂತರ ಡಾ. ರಾಜ್ ಹೋರಾಟಕ್ಕೆ ಬಂದಿದ್ದರು. ನಾವು ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿನಿಮಾದವ್ರು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಎಲ್ಲರೂ ಹೋರಾಟ ಮಾಡೋಣ ಬನ್ನಿ. ಸಿನಿಮಾ ಡಬ್ಬಿಂಗ್ ವಿಚಾರವಾಗಿಯೂ ಹೋರಾಟ ಆಗಬೇಕಿದೆ. ಇಲ್ಲವಾದಲ್ಲಿ ಕನ್ನಡ ಕಲಾವಿದರು ಡಬ್ಬಿಂಗ್ ಆರ್ಟಿಸ್ಟ್ ಆಗಬೇಕಾಗುತ್ತದೆ. ಕನ್ನಡ ಭಾಷೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಇಂದ್ರಜಿತ್ ಲಂಕೇಶ್ ಕರೆ ನೀಡಿದರು.
ಡ್ರಗ್ಸ್ ವಿರುದ್ಧ ಹೋರಾಟ : ನನ್ನ ಹೋರಾಟ ಡ್ರಗ್ಸ್ ವಿರುದ್ಧ, ಯಾರ ವೈಯಕ್ತಿಕ ವಿಚಾರವಾಗಿ ಅಲ್ಲ. ಆದ್ದರಿಂದ ಡ್ರಗ್ಸ್ ಪ್ರಕರಣಗಳು ಬಹಳಷ್ಟು ಹೊರ ಬಂದಿವೆ. ಈ ವಿಚಾರವಾಗಿ ಪೊಲೀಸ್ ಆಯುಕ್ತರು ಬೆನ್ನು ತಟ್ಟಿದರು ಎಂದರು.