ಮೈಸೂರು : ಜೆಡಿಎಸ್ ಹಾಳಾಗಲಿ ಎಂದು ನಾನು ಯಾವತ್ತೂ ಹೇಳಿಲ್ಲ. ಜೆಡಿಎಸ್ ಪಕ್ಷ ಉಳಿಯಬೇಕೆಂಬುದು ನನ್ನ ಬಯಕೆ. ಅವರು ಯಾವ ದಿಕ್ಕಿನಲ್ಲಿ ಹೋಗ್ತಿದ್ದಾರೋ, ಅದೇ ದಿಕ್ಕಿನಲ್ಲಿ ಹೋಗಿ ಪಕ್ಷ ಉಳಿಸಲಿ ಎಂದು ಶಾಸಕ ಜಿ.ಟಿ.ದೇವೇಗೌಡರು ಅವರು ಸಾ.ರಾ.ಮಹೇಶ್‌ಗೆ ತಿರುಗೇಟು ನೀಡಿದ್ದಾರೆ.
ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ನಾನು ಜೊತೆಯಲಿದ್ದು ಮೋಸ ಮಾಡಿದ್ರೆ ತಾಯಿಗೆ ಮೋಸ ಮಾಡಿದಂತೆ. ನಾನು ಎರಡು ವರ್ಷಗಳಿಂದ ದೂರ ಉಳಿದಿದ್ದೆ. ಹೀಗಾಗಿ, ಉತ್ತರ ಕೊಡಲು ನಾನೇನು ಚುನಾವಣೆಗೆ ನಿಂತಿರಲಿಲ್ಲ ಎಂದು ಕುಟುಕಿದ್ದಾರೆ.
ನಾನು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಪರವಾಗಿ ಪ್ರಚಾರ ಮಾಡಿದ್ದೆ. ಪರಿಷತ್ ಫಲಿತಾಂಶದಿಂದ ನನ್ನ ವರ್ಚಸ್ಸಿಗೇನು ಧಕ್ಕೆ ಇಲ್ಲ. ನಾನು ಇಡೀ ಜಿಲ್ಲೆಗೆ ಹೋಗಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಸಂದೇಶ್ ನಾಗರಾಜ್ ಪರವಾಗಿ ಇಡೀ ಜಿಲ್ಲೆಗೆ ಹೋಗಿ ಪ್ರಚಾರ ಮಾಡಿದ್ದೆ.
ಆದರೆ, ಈ ಬಾರಿ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಕ್ಕಷ್ಟೇ ಹೋಗಿದ್ದೆ. ಮತದಾರರ ತೀರ್ಪಿಗೆ ನಾವೆಲ್ಲಾ ತಲೆಬಾಗಬೇಕಾಗುತ್ತೆ. ಬಿಜೆಪಿ ಹಾಗೂ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದೇನೆ. ಪರಿಷತ್ ಫಲಿತಾಂಶದಿಂದ ಸಾ.ರಾ.ಮಹೇಶ್‌ಗೆ ಶಕ್ತಿ, ಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಅದನ್ನು ಹಾಗೇ ಉಳಿಸಿಕೊಂಡು ಹೋಗಲಿ ಎಂದು ವ್ಯಂಗ್ಯವಾಡಿದರು.
ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆಗೆ ಜಿಟಿಡಿ ಬೆಂಬಲ : ನೆಲ, ಜನ ವಿಚಾರದಲ್ಲಿ ರಾಜ್ಯ, ಕೇಂದ್ರದ ಗಮನ ಸೆಳೆಯೋದು ವಿರೋಧ ಪಕ್ಷದ ಕರ್ತವ್ಯ. ಅದನ್ನ ಕಾಂಗ್ರೆಸ್ ಪಕ್ಷ ಮಾಡುತ್ತಿದೆ, ಅವರಿಗೆ ಶುಭವಾಗಲಿ. ಯಾವುದೇ ರೈತ ಪರ ಹೋರಾಟಗಳಿಗೆ ನನ್ನ ಬೆಂಬಲ ಇದ್ದೇ ಇರುತ್ತೆ ಎಂದರು.
ನಕಲಿ ನಂದಿನಿ ತುಪ್ಪ ಗೋಡಾನ್ ಪತ್ತೆ ವಿಚಾರವಾಗಿ ಮಾತನಾಡಿ, ತಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಿಎಂ ಜೊತೆ ಚರ್ಚಿಸಿ ಸಿಒಡಿ ತನಿಖೆಗೆ ಒತ್ತಾಯ ಮಾಡುತ್ತೀನಿ. ತಪಿತಸ್ಥರನ್ನ ಕೂಡಲೇ ಅರೆಸ್ಟ್ ಮಾಡಿಸುವಂತೆ ಡಿಜಿ ಪ್ರವೀಣ್ ಸೂದ್‌ಗೆ ಫೋನ್ ಮಾಡಿ ಹೇಳಿದ್ದೆ.
ಅಂದು ಮೈಮುಲ್ ಎಂಡಿ, ಎಸ್ಪಿಗೂ ಫೋನ್ ಮಾಡಿ ಮಾತಾಡಿದ್ದೇನೆ. ನಂದಿನಿ ತುಪ್ಪವನ್ನ ನಮ್ಮ ಮನೆಯಲ್ಲೂ ಕೂಡ ಬಳಸುತ್ತಾರೆ. ಇಂತಹ ತುಪ್ಪವನ್ನ ನಕಲಿ ಮಾಡಲು ಮುಂದಾಗಿರುವವರಿಗೆ ಶಿಕ್ಷೆಯಾಗಲೆಂದು ಆಗ್ರಹಿಸುತ್ತೇನೆ.
ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿಲ್ಲ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಎಲ್ಲಿಯೂ ಲಘುವಾಗಿ ಮಾತನಾಡಿಲ್ಲ. ನಾನು ಇನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ. ಯಾವತ್ತೂ ಜೆಡಿಎಸ್ ಹಾಳಾಗಲಿ ಎಂದು ಬಯಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಅವರು ಬಾಗಿಲು ಹಾಕೋದಲ್ಲ, ನಾನೇ ಜೆಡಿಎಸ್ ಬಾಗಿಲು ಮುಚ್ಚಿ ಬಂದಿದ್ದೇನೆ: ಶಾಸಕ ಜಿ.ಟಿ. ದೇವೇಗೌಡ ಟಾಂಗ್