ಮೈಸೂರು: ಲಾಕ್ ಡೌನ್‌ನಿಂದಾಗಿ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತರಲು ಕಷ್ಟವಾಗಿದ್ದು, ನಷ್ಟ ಉಂಟಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಎಪಿಎಂಸಿಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಕೊರೊನಾ ಸೋಂಕು ನಿವಾರಕ ಟನಲ್ ಆರಂಭಿಸಲಾಗುತ್ತಿದೆ. ಮೈಸೂರಿನಲ್ಲೂ ಸಹ ಇದನ್ನು ಪ್ರಾರಂಭಿಸಿದ್ದೇವೆ ಎಂದರು.
ರೈತರು ಬೆಳೆದ ಹಣ್ಣು, ತರಕಾರಿಯನ್ನು ಎಪಿಎಂಸಿಗೆ ತರಲು ಚೆಕ್‌ಪೋಸ್ಟ್‌ನಲ್ಲಿ ಹಾಗೂ ಪೊಲೀಸರು ಯಾವುದೇ ತೊಂದರೆ ನೀಡಬಾರದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಬಗ್ಗೆ ಯಾವುದೇ ತೊಂದರೆ ಇಲ್ಲ ಎಂದು ಡ್ರೈವರ್‌ಗಳು ಸಹ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಿಂದ ಕೇರಳಕ್ಕೆ ಹೆಚ್ಚಿನ ತರಕಾರಿಗಳು ಹೋಗುತ್ತಿತ್ತು. ಆದರೆ ಈಗ ಲಾಕ್ ಡೌನ್ ವಿಧಿಸಿರುವುದರಿಂದ ಯಾವುದೇ ವಾಹನಗಳು ಹೋಗುತ್ತಿಲ್ಲ. ಇದರಿಂದ ರೈತರಿಗೆ ನಷ್ಟ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಒಂದು ಕೋಲ್ಡ್ ಸ್ಟೋರೇಜ್ ಬೇಕು ಎಂದು ಕೇಳಿದ್ದಾರೆ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
ರೈತರು ತೆಗೆದುಕೊಂಡ ಸಾಲದ ಕಂತನ್ನು ಕಟ್ಟಲು 3 ತಿಂಗಳು ಸಮಯಾವಕಾಶ ಇದೆ. ಯಾವ ರೈತರಿಗೂ ತೊಂದರೆ ಇಲ್ಲ ಎಂದು ತಿಳಿಸಿದರು.