ಬೆಂಗಳೂರು: ನಮ್ಮ ಮೆಟ್ರೋ ಸಂಸ್ಥೆ 2025ರ ಹೊಸ ವರ್ಷದ ಅಂಗವಾಗಿ ರೈಲಿನ ಸೇವಾವಧಿಯನ್ನು ವಿಸ್ತರಿಸಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1ರಂದು ಮುಂಜಾನೆ 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ(ಮೆಜೆಸ್ಟಿಕ್)ನಿಂದ ಕೊನೆಯ ರೈಲುಗಳು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಗಂಟೆಗೆ ಹೋರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ರೈಲುಗಳು ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1ರ ಮುಂಜಾನೆ 2 ಗಂಟೆಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ ಎಂ.ಜಿ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವರ್ಷದ ಕೊನೆಯ ದಿನದ ರಾತ್ರಿ 11 ಗಂಟೆಯಿಂದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ದ್ವಾರಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ನಲ್ಲಿ ರೈಲುಗಳು ನಿಲ್ಲಲಿವೆ ಎಂದು ಮಾಹಿತಿ ನೀಡಿದೆ.
ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಗಮ್ಯಸ್ಥಾನಕ್ಕೆ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು 50 ರೂ ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಬಳಸಬೇಕು. ಈ ಕಾಗದದ ಟಿಕೆಟ್ ಅನ್ನು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಡಿಸೆಂಬರ್ 31ರ ಬೆಳಗ್ಗೆ 8 ಗಂಟೆಯಿಂದ ಮುಂಗಡವಾಗಿ ಖರೀದಿಸಲು ಅವಕಾಶವಿದೆ.
ಸಾಮಾನ್ಯ ಕ್ಯೂಆರ್ ಕೋಡ್ ಟಿಕೆಟ್ ಮತ್ತು ಕಾರ್ಡ್ಗಳಿಂದ ಈ ನಿಲ್ದಾಣಗಳಿಂದ ಪ್ರಯಾಣಿಸಬಹುದು. ವೈಟ್‌ಫೀಲ್ಡ್ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಹೋಗುವವರು ಪ್ರಯಾಣಕ್ಕಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬಹುದು. ಚಲ್ಲಘಟ್ಟ ಹಾಗೂ ಮಾದಾವರಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು: ಕುಂಭಮೇಳಕ್ಕಾಗಿ ಮೈಸೂರಿನಿಂದಲೂ ಟ್ರೇನ್