ಮೈಸೂರು: ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನಕ ನೌಕರರ ಸಂಘ ಏರ್ಪಡಿಸಿದ್ದ ಶ್ರೀ ಕನಕದಾಸರ 533ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ನನ್ನ ನೇರ ಹಾಗೂ ಸತ್ಯ ಮಾತುಗಳಿಗೆ ಮಾಧ್ಯಮವರು ಬಣ್ಣ ಹಚ್ಚಿದ್ರೆ, ಆರ್‌ಎಸ್‌ಎಸ್‌ನವರು ರಂಗು ರಂಗಿನ ಬಣ್ಣ ಹಾಕ್ತಾರೆ. ಹಾಗಾಗಿ ನಾನು ಮಾತನಾಡುವ ಕೆಲ ವಿಚಾರಗಳು ವಿವಾದಗಳಾಗಿ ಬಿಡುತ್ತವೆ ಎಂದರು.
ಇತ್ತೀಚಿನ ವಿವಾದ ಅಂದ್ರೆ ಹನುಮ ಹುಟ್ಟಿದ ದಿನದ ವಿವಾದ. ಹನುಮ ಹುಟ್ಟಿದ್ದು ನನಗೆ ಗೊತ್ತಿರಲಿಲ್ಲ ಕೇಳಿದೆ. ನಿಮಗ್ಯಾರಿಗಾದ್ರು ಗೊತ್ತಾ ಹೇಳಿ.. ಅದಕ್ಕೆ ಅದನ್ನೇ ವಿವಾದ ಮಾಡಿಬಿಟ್ಟರು ಆರ್‌ಎಸ್ಎಸ್‌ನವರು. ಸಾಮಾಜಿಕ ಜಾಲತಾಣದಲ್ಲಿ ರಂಗುರಂಗಿನ ಬಣ್ಣ ಹಾಕಿ ಹರಿಬಿಟ್ಟರು. ಗೋಮಾಂಸದ ಬಗ್ಗೆ ಅದು ಆಹಾರ ಹಕ್ಕು ಎಂದು ಹೇಳಿದ್ದೆ. ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದಿದ್ದೆ. ಅದನ್ನೂ ವಿವಾದ ಮಾಡಿದ್ರು ಎಂದರು.
ನಾನು ಗೋಮಾಂಸ ಈವರೆಗೂ ತಿಂದಿಲ್ಲ, ತಿನ್ನಬೇಕು ಅಂದ್ರೆ ತಿನ್ನುತ್ತೇನೆ ಅಂದೆ. 12 ವರ್ಷದ ಗೋವುಗಳನ್ನ ಸಾಯಿಸಬಹುದಿತ್ತು. ಈಗ ಅದನ್ನ ಮಾಡಲು ಆಗ್ತಿಲ್ಲ. ಮಾರಬೇಡಿ ಅಂದ್ರೆ ಏನರ್ಥ? ಒಂದು ಹಸು, ಎಮ್ಮೆ, ಎತ್ತು ಸಾಕಲು 7 ಕೆಜಿ ಮೇವು ಬೇಕು. ಕೊಬ್ಬಿದ ಹಸು ತಿನ್ನುವ ಬಗ್ಗೆ ಶ್ಲೋಕ ಇದೆ. ಅದರಲ್ಲಿ ಇರೋದನ್ನೆ ಹೇಳುತ್ತೀನಿ. ನಾನು ಹೇಳಿದ್ರೆ ವಿವಾದ ಮಾಡ್ತಾರೆ. ರಂಗು ರಂಗಿನ ಬಣ್ಣ ಹಾಕ್ತಾರೆ ಎಂದರು.
ಓದಿ:ಸಿಎಂ ಬದಲಾವಣೆ ಖಚಿತ; ಇದು RSS ಮೂಲದಿಂದ ದೊರೆತ ಖಚಿತ ಮಾಹಿತಿ: ಸಿದ್ದರಾಮಯ್ಯ
ಪ್ರಗತಿಪರ ಸಾಹಿತಿಗಳ ಮೇಲೂ ಕಣ್ಣಿದೆ: ಇದರಲ್ಲಿ ಮಾಲಗತ್ತಿ ಘಂಟಿಯೂ ಇದ್ದಾರೆ. ನನ್ನ ಇಮೇಜ್ ಕಡಿಮೆ ಮಾಡಿ, ಸಾರ್ವಜನಿಕ ಜೀವನದಲ್ಲಿ ಖಳನಾಯಕನಾಗಿ ಮಾಡ್ತಾರೆ. ಆದರೆ ಸಮಾಜದಲ್ಲಿ ನನಗೆ ಮೌಲ್ಯ ಜೀವನವಿದೆ. ಜಾತಿ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರಿದೆ. ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲದೆ ಇರೋದೆ ಇದಕ್ಕೆ ಕಾರಣ.
ಹಳ್ಳಿಯವರಿಗೆ ಇಮ್ಯೂನಿಟಿ ಜಾಸ್ತಿ ಇರುತ್ತೆ: ನನಗೂ ಕೋವಿಡ್ ಬಂದಿತ್ತು. ಇಲ್ಲಿ ನೋಡಿ ತುಂಬಾ ಜನ ಮಾಸ್ಕ್ ಹಾಕಿಲ್ಲ. ಯಾಕಂದ್ರೆ ಇವರೇ ಬಹುತೇಕ ಹಳ್ಳಿಯವರು. ಅವರಿಗೆ ಕೊರೊನಾ ಬರೋಲ್ಲ. ನಾವು ಚಿಕ್ಕಂದಿನಲ್ಲಿ ಬಾವಿ ನೀರು, ಕೆರೆ ನೀರು ಕುಡಿಯುತ್ತಿದ್ದೆವು. ಉಗಿದರೆ ಮಣ್ಣು ಹೊರಗೆ ಬರುತ್ತಿತ್ತು. ಆಗ ಯಾವ ಖಾಯಿಲೆಯೂ ಬರ್ತಿರಲಿಲ್ಲ. ಈಗ ಬೋರ್ ವೆಲ್ ನೀರು ಕುಡಿಯೋಕೆ ಆಗೋಲ್ಲ. ಬಿಸ್ಲರಿ ನೀರನ್ನೇ ಕಾಯಿಸಿ ಕುಡಿಯಬೇಕು ಅನ್ನೋ ಪರಿಸ್ಥಿತಿ ಬಂದಿದೆ. ಯೂನಿವರ್ಸಿಟಿಯಲ್ಲಿ ಓದಿದವರೇ ಜಾತಿವಾದಿಗಳಾಗಿದ್ದಾರೆ ಎಂದರು.