ಮೈಸೂರು: ನಗರದ ಅಶೋಕಪುರಂನಲ್ಲಿರುವ ರೈಲ್ವೆ ವಕ್೯ ಶಾಪ್ನಲ್ಲಿ ಹೈಸ್ಪೀಡ್ ಮೆಮು ರೈಲು ಗಾಲಿ ತಯಾರಿಸಲಾಗುತ್ತಿದ್ದು, ದೇಶದ ಕಾರ್ಯಾಗಾರಗಳಲ್ಲೇ ಮೊದಲ ಪ್ರಯತ್ನ ಇದಾಗಿದೆ.
ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಿಭಾಗದ ನಿಗಾದಲ್ಲಿ ಇಲ್ಲಿನ ವಕ್೯ ಶಾಪ್ನಲ್ಲಿ ಮೊದಲ ಹಂತದಲ್ಲಿ ಆರು ಜೊತೆ ಗಾಲಿಗಳನ್ನು ಸಿದ್ದಪಡಿಸಲಾಗಿದ್ದು, ಇವುಗಳನ್ನು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬೆಮೆಲ್) ಗೆ ಕಳುಹಿಸಲಾಗಿದೆ.
ಭಾರತೀಯ ರೈಲ್ವೆ ಮಂಡಳಿ ಸಲ್ಲಿಸಿರುವ ಬೇಡಿಕೆಗನುಗುಣವಾಗಿ ಬೆಮೆಲ್ ಅಭಿವೃದ್ಧಿಪಡಿಸುತ್ತಿರುವ 8 ಕೋಚ್ಗಳ ಮೆಮು ರೈಲಿಗೆ ಈ ಗಾಲಿಗಳನ್ನು ಅಳವಡಿಸಲಾಗುತ್ತದೆ. ಈ ರೈಲು ಗಾಜಿಯಾಬಾದ್ ಮತ್ತು ನವದೆಹಲಿ ವಿಭಾಗದಲ್ಲಿ ಸಂಚರಿಸಲಿದೆ. ಈ ಗಾಲಿಗಳನ್ನು ಬಳಸಿ ಪ್ರತಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಮೆಮು ರೈಲು ಚಲಿಸಲು ಸಾಧ್ಯವಾಗಲಿದೆ. ರೈಲಿನ ವೇಗ ಹೆಚ್ಚಿಸುವ ಉದ್ದೇಶದಿಂದ ಈ ಗಾಲಿಗಳನ್ನು ತಯಾರಿಸಲಾಗುತ್ತಿದೆ.
225 ಟ್ರೈಲರ್ ಕೋಚ್ ಬೋಗಿಗಳಿಗೆ 900 ಜೊತೆ ಟ್ರೈಲರ್ ಕೋಚ್ ಗಾಲಿಗಳು ಹಾಗೂ 75 ಮೋಟಾರ್ ಕೋಚ್ ಬೋಗಿಗಳಿಗೆ 300 ಜೊತೆ ಮೋಟಾರ್ ಕೋಚ್ ಗಾಲಿಗಳಿಗೆ ಬೆಮಲ್ ಬೇಡಿಕೆ ಸಲ್ಲಿಸಿದೆ. ಗಾಲಿಗಳ ತಯಾರಿಕೆಗಾಗಿ 2.4 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಬೆಮೆಲ್ ಪೂರೈಸಲಿದೆ.
ಇದೇ ಮೊದಲ ಬಾರಿಗೆ ಮೆಮು ರೈಲಿನ ಹೈಸ್ಪೀಡ್ ಗಾಲಿ ತಯಾರಿಸುತ್ತಿರುವುದು ಮೈಸೂರು ರೈಲ್ವೆ ವಕ್೯ ಶಾಪ್ ಸಿಬ್ಬಂದಿಗೆ ಸಂಭ್ರಮ ತಂದಿದೆ.