ಮೈಸೂರು: ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಂದ ಕೆಜಿಗಟ್ಟಲೆ ಚಿನ್ನ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸಿ, ಅವರಿಂದ 45 ಲಕ್ಷ ರೂ. ಮೌಲ್ಯದ ಒಂದೂವರೆ ಕೆ.ಜಿ ಚಿನ್ನ ವಶಪಡಿಸಿಕೊಳ್ಳುವಲ್ಲಿ ಮೈಸೂರು ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ 5 ತಿಂಗಳ ಹಿಂದೆ ಬೆಂಗಳೂರು ಮೂಲದ ನವೀನ್ ಕುಮಾರ್ ಎಂಬಾತ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಹೊರಟ ಸಂದರ್ಭದಲ್ಲಿ ರೈಲಿನ ಒಳಗಡೆ ಬಂದ 5 ಜನ ಅಪರಿಚಿತರು ಹೆದರಿಸಿ, 2 ಕೆಜಿ 300ಗ್ರಾಂ ತೂಕದ ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದರು.ಈ ಸಂಬಂಧ ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ 5 ಜನ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿ ಟಿವಿಯಿಂದ ಗೊತ್ತಾಗಿತ್ತು.
ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯ ಮಾಲಂಗಿ ಮತ್ತು ವಲ್ವಾಡ್ ಗ್ರಾಮದ ರಮೇಶ್ ಹಿಟ್ಟಂಕರ್, ಮಾರುತಿ, ಅನಂತ ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಾಗ 1 ಕೆಜಿ 500 ಗ್ರಾಂ ಚಿನ್ನ ಸಿಕ್ಕಿದೆ. ಉಳಿದ ಇಬ್ಬರು ಆರೋಪಿಗಳಾದ ಲಕ್ಷ್ಮಣ್ ಪೀಟಾಂಕರ್ ಹಾಗೂ ಭಾನುದಾಸ್ ಪೀಟಾಂಕರ್ ತಲೆಮರೆಸಿಕೊಂಡಿದ್ದಾರೆ.5 ತಿಂಗಳ ನಂತರ ರೈಲ್ವೆ ಪೊಲೀಸರು ಪ್ರಕರಣ ಭೇದಿಸಿದ್ದು, ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.