ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಬೇಕಷ್ಟೇ.. ಈ ಬಗ್ಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರೊಡನೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕೆಲಸ ಆರಂಭಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಇಂದು ನಡೆಯುವ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ. ನಮ್ಮ ಪಕ್ಷದ 'ಜನತಾ ಜಲಧಾರೆ' ವಾಹನದ ಮೂಲಕ ನಾಡಿನ ನೀರಾವರಿ ಯೋಜನೆ ಹಾಗೂ ಜೆಡಿಎಸ್ ಪಕ್ಷದ ನೀರಾವರಿ ಯೋಜನೆಗಳ ಕನಸನ್ನು ರಾಜ್ಯಾದ್ಯಂತ ಜನತೆಗೆ ತಿಳಿಸಲಾಗಿದೆ ಎಂದರು.
ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದ ಈತನಕ ನಿರಂತರವಾಗಿ ಉತ್ತಮ ಮಳೆಯಾಗುತ್ತಿದೆ. ಇದು ಶುಭ ಸೂಚಕ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದು ಹೆಚ್ಡಿಕೆ ಹೇಳಿದರು.
ಇದನ್ನೂ ಓದಿ: ಬೀದಿಯಲ್ಲಿ ರಕ್ತದ ಓಕುಳಿ ಹರಿಸುವುದು ಬೇಡ: ಹೆಚ್.ಡಿ.ಕುಮಾರಸ್ವಾಮಿ