ಮೈಸೂರು: ಸಿಂಧಗಿ ಮತ್ತು ಹಾನಗಲ್ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಹಾಗೂ ಜೆಡಿಎಸ್ ಸೋಲಿಸುವ ಸಲುವಾಗಿ ಸಿದ್ದರಾಮಯ್ಯ ಅಂಡ್ ಟೀಂ ಸಿಂದಗಿಯಲ್ಲಿ ಬೀಡು ಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.
ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇರುವುದರಿಂದ ಕಾಂಗ್ರೆಸ್ ಅಲ್ಲಿ ಬೀಡು ಬಿಟ್ಟಿದೆ. ಸಿದ್ದರಾಮಯ್ಯ ಪ್ರತಿ ಸಭೆಯಲ್ಲೂ ನನ್ನ ವಿರುದ್ಧ ಹೊಲ ಉಳುಮೆ ಮಾಡಿದ್ದಾರಾ? ಎಂದು ಆರೋಪ ಮಾಡುತ್ತಾರೆ. ಆದರೆ ನಿಜವಾದ ರೈತ ನಾನು, ನಾವು ಕುರಿ ಮಂದೆಯ ನಡುವೆ ಊಟ ಮಾಡಿ, ಮಲಗಿದ್ದೇನೆ. ನಾನು ಕೃಷಿಕ ಹೌದೋ, ಅಲ್ಲವೋ ಅಂತಾ ಬಿಡದಿ ತೋಟಕ್ಕೆ ಬಂದು ನೋಡಲಿ. ಸಿದ್ದರಾಮಯ್ಯ ಎಲ್ಲಿ ಹೊಲ ಉಳುಮೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ:
ಕರ್ನಾಟಕದಲ್ಲಿ ಜಾತಿ ಎಂಬ ವಿಷ ಬೀಜ ಬಿತ್ತಿ, ಜಾತಿ ಜಾತಿಗಳನ್ನೇ ಸಿದ್ದರಾಮಯ್ಯ ಒಡೆದರು. ಸಿಂದಗಿ, ಹಾನಗಲ್‌ನಲ್ಲಿ ಜಾತಿವಾರು ಸಭೆಗಳನ್ನ ಮಾಡ್ತಿದ್ದಾರೆ. ಇವರು ಜಾತ್ಯಾತೀತವಾಗಿದ್ದರೆ ಜಾತಿವಾರು ಸಭೆ ಯಾಕೆ ನಡೆಸುತ್ತಿದ್ದರು. ಇವರೆಂತಹ ಜಾತ್ಯಾತೀತ ವಾದಿಗಳು ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬ್ರದರ್ ಎಂದುಕೊಂಡು ಹೆಚ್‌ಡಿಕೆ ಮುಸಲ್ಮಾನರ ಕತ್ತು ಕೋಯ್ತಾರೆ ಎಂಬ ಜಮೀರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಫಾರುಕ್‌ರನ್ನು ಚುನಾವಣೆಗೆ ನಿಲ್ಲಿಸಿ ಕತ್ತು ಕೋಯ್ದವರು ಯಾರು ?, ಫಾರುಕ್ ವಿರುದ್ಧ ರಾಮಸ್ವಾಮಿಗೆ ಓಟು ಹಾಕಿದ್ದು ಯಾರು?, ಇವರಿಂದ ಮುಸಲ್ಮಾನರು ಉದ್ದಾರ ಆಗಿದ್ದಾರಾ?, ರಾಮಸ್ವಾಮಿಯವರನ್ನಾದರೂ ಉಳಿಸಿಕೊಂಡಿದ್ದಾರಾ?, ಇವರಿಂದ ನಾವು ಕಲಿಯುವುದು ಏನಿಲ್ಲ. ಇವರೆಲ್ಲಾ ಚುನಾವಣೆ ಹಿನ್ನೆಲೆ ಹೀಗೆ ಮಾತನಾಡುತ್ತಾರೆ ಎಂದರು.
ಶಾಲೆಗಳನ್ನು ಆರಂಭಿಸಿರುವುದು ಉತ್ತಮ ಬೆಳವಣಿಗೆ:
ಇಂದಿನಿಂದ ಪ್ರಾಥಮಿಕ ಶಾಲೆಗಳ ಆರಂಭ ಕುರಿತು ಮಾತನಾಡಿದ ಅವರು, ಶಾಲೆಗಳನ್ನು ಆರಂಭಿಸಿರುವುದು ಉತ್ತಮ ಬೆಳವಣಿಗೆ. ಆದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಬೇಕು. ಅಧಿಕಾರಿಗಳು, ಶಿಕ್ಷಕರು ಜಾಗೃತರಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕು ಎಂದರು.
ಪಕ್ಷ ಬಿಟ್ಟು ಹೋಗಿ ಎಂದು ಯಾರಿಗೂ ಹೇಳಿಲ್ಲ:
ಕುಮಾರಸ್ವಾಮಿಯೇ ನಮ್ಮನ್ನ ಹೊರದಬ್ಬುತ್ತಿದ್ದಾರೆ ಎಂಬ ಶಾಸಕ ಎಸ್.ಆರ್.ಶ್ರೀನಿವಾಸ್, ಎಂಎಲ್‌ಸಿ ಕಾಂತರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಬಿಟ್ಟು ಹೋಗಿ ಅಂತ ನಾನು ಯಾರಿಗೂ ಹೇಳಿಲ್ಲ. ಸಂಘಟನೆ ದೃಷ್ಟಿಯಿಂದ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇನೆ. ನಾನು ದುರಂಕಾರದಿಂದ ನಡೆದುಕೊಂಡಿಲ್ಲ. ಕಳೆದ ಮೂರು ವರ್ಷಗಳಿಂದ ನಮ್ಮ ಪಕ್ಷದಲ್ಲಿದ್ದು, ಯಾವ ರೀತಿ ಹೇಳಿಕೆ ಕೊಟ್ಟಿದ್ದಾರೆ ಅಂತ ನಾನು ನೋಡಿದ್ದೇನೆ. ನನ್ನ ವಿರುದ್ಧವೇ ವೈಯುಕ್ತಿಕ ಹೇಳಿಕೆ ಕೊಟ್ಟು ಲೇವಡಿ ಮಾಡಿದ್ದಾರೆ. ಆದರೂ ನಾನೇ ಕಾಲ್‌ಮಾಡಿ ಸಂಘಟನಾ ಸಭೆಗೆ ಆಹ್ವಾನಿಸಿದರೂ ಅವರು ಬರಲಿಲ್ಲ ಎಂದು ಹೇಳಿದರು.
2023 ಕ್ಕೆ ಜೆಡಿಎಸ್ ಪರ್ವ ಆಗಬೇಕೆಂಬುದು ನನ್ನ ಉದ್ದೇಶ:
ಮುಂದಿನ ಚುನಾವಣೆ 2023ಕ್ಕೆ ಜೆಡಿಎಸ್ ಪರ್ವ ಆಗಬೇಕೆಂಬುದು ನನ್ನ ಉದ್ದೇಶವಾಗಿದ್ದು, ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಮಿಷನ್ 123 ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಕಾರ್ಯಾಗಾರದ ಪರಿಣಾಮ ಇಂದು ಅಭ್ಯರ್ಥಿಗಳು ಕ್ಷೇತ್ರದಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ನವೆಂಬರ್ 1 ರಿಂದ ಜನತಾ ಸಂಗಮ ಕಾರ್ಯಕ್ರಮ ನಡೆಯಲಿದೆ. ನನಗೆ ಚಾಮುಂಡೇಶ್ವರಿ, ಗುಬ್ಬಿ ಎನ್ನುವುದಕ್ಕಿಂತ ಇಡೀ 224 ಕ್ಷೇತ್ರಗಳ ಸಂಘಟನೆ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.