ಮೈಸೂರು: ಬಿಟ್‌ಕಾಯಿನ್ ಪ್ರಕರಣಕ್ಕೆ (Bitcoin scam) ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಬಳಿ ಸಾಕ್ಷಿಗಳಿದ್ದರೆ ಕೊಡಲಿ. ನಾನೇ ಮುಖ್ಯಮಂತ್ರಿ ಹಾಗೂ ಸರ್ಕಾರದ ಬಳಿ ಮಾತನಾಡುತ್ತೇನೆ. ಆದರೆ ಹಿಟ್ ಆ್ಯಂಡ್ ರನ್ ಎಂಬಂತ ಹೇಳಿಕೆ ನೀಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಸಾಕ್ಷಿ, ಆಧಾರಗಳಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಳಿ ಸಾಕ್ಷಿ ಇದ್ದರೆ ನೀಡಲಿ ನಾನೇ ಸರ್ಕಾರದೊಂದಿಗೆ ಮಾತನಾಡುತ್ತೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು, 14 ಬಾರಿ ಬಜೆಟ್ ಮಂಡಿಸಿದವರು. ಡಿನೋಟಿಫಿಕೇಷನ್ ರೀಡೂ ಮಾಡಿದವರು ನಿಮಗೆ ಬಿಟ್‌ಕಾಯಿನ್ ಬಗ್ಗೆ ಗೊತ್ತಿರಬೇಕಲ್ವಾ ಎಂದು ಪ್ರಶ್ನಿಸಿದರು.
'ಶ್ರೀಕಿದು ಬೈಪರ್ ಬ್ರೈನ್'
ಹೆಚ್.ಡಿ.ಕುಮಾರಸ್ವಾಮಿ ಅವರು 15 ದಿನ ಕಾಯಿರಿ ಎಂದು ಹೇಳಿದ್ದಾರೆ. ಈಗಲೇ ಸಾಕ್ಷಿ ಇಲ್ಲ. 15 ದಿನಗಳಲ್ಲಿ ಹೇಗೆ ಸಾಕ್ಷಿ ತರುತ್ತೀರಿ ಎಂದು ಪ್ರಶ್ನಿಸಿದರು. ಬಿಟ್‌ಕಾಯಿನ್ ಮಾಯಾವಿ ತರಹ ಹೋಗುತ್ತಿದೆ. ಇದರಲ್ಲಿ ಸಿಎಂ ಅವರನ್ನು ಎಳೆಯುವಂತದ್ದು, ಸರಿಯಲ್ಲ. ಶ್ರೀಕಿದು ಹೈಪರ್ ಬ್ರೈನ್, (Hacker Sriki) ಶ್ರೀಕಿ ಎಂದರೆ ಎಲ್ಲಾ ಪಕ್ಷದವರಿಗೆ ಒಂದು ರೀತಿ ಭಯ ಇದೆ. ಆದ್ರೆ ತಪ್ಪು ಮಾಡಿಲ್ಲ ಅಂದ್ರೆ ಭಯ ಏಕೆ? ಎಂದರು.
ನಲಪಾಡ್ ಮೇಲೆ ಆಪಾದನೆಗಳಿದ್ದರೂ ಚುನಾವಣೆಗೆ ನಿಲ್ಲಿಸಿದ್ರಿ, ಗೆದ್ದ ನಂತರ ಅವಕಾಶ ಅವರಿಗೆ ನೀಡುತ್ತಿಲ್ಲ. ಅಂತೆಯೇ ಅಹಿಂದ ಎಂದು ಹೇಳಿಕೊಂಡು ಅವರ ವಿರುದ್ಧವೇ ಹೇಳಿಕೆ ನೀಡಿದ್ದೀರಿ, ಇಂದು ದಲಿತರ ಪರಿಸ್ಥಿತಿ ಏನಾಗಿದೆ ಎಂದು ಯೋಚಿಸಬೇಕು. ಅಹಿಂದ ನಿಮ್ಮಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅಥವಾ ಅವರ ನಡವಳಿಕೆ ಕಾರಣ ಎಂದು ಹೇಳಿದರು.
'ಕಾಂಗ್ರೆಸ್ ಪರಿಷತ್ ಟಿಕೆಟ್ಗೆ 15 ಕೋಟಿ ಬ್ಯಾಂಕ್ ಗ್ಯಾರಂಟಿ':
ವಿಧಾನ ಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂಎಲ್ಸಿ ಟಿಕೆಟ್ ಬೇಕು ಎಂದರೆ 1 ಲಕ್ಷ ರೂ. ಹಿಂದಿರುಗಿಸಲಾಗದ ಡೆಪಾಸಿಟ್ ಇಡಬೇಕು ಹಾಗೂ 15 ಕೋಟಿ ರೂ.ಬ್ಯಾಂಕ್ ಗ್ಯಾರಂಟಿ ತರಬೇಕು ಎಂದು ಹೇಳಿದ್ದಾರೆ. ಇದು ಸರಿಯಲ್ಲ. ಯುವಕರನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
'ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ':
ಪ್ರಸ್ತುತ ದಿನಗಳಲ್ಲಿ ಭಾರಿ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಬದುಕು ಮೂರಾಬಟ್ಟೆಯಾಗಿದೆ. ಮನೆ, ಬ್ರಿಡ್ಜ್ ಬಿದ್ದು, ಹೋಗುತ್ತಿವೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ. ನೆರೆ ಹಾವಳಿಯಿಂದ ಜನ ಸಾಯುತ್ತಿದ್ದಾರೆ. ತಿನ್ನುವ ಅನ್ನಕ್ಕೆ ಕುತ್ತು ಬಂದಿದೆ. ಆದ್ದರಿಂದ ರೈತರು ಹಾಗೂ ಜನರ ಬದುಕು ಕಟ್ಟಿಕೊಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ 10 ಕೋಟಿ ಸಾಲ ಮಾಡಿಕೊಂಡಿರುವ ರಘು ಕೌಟಿಲ್ಯಗೆ ಟಿಕೆಟ್ ನೀಡಬೇಕು. ಅಲ್ಲದೆ, ಅವರು ಪಕ್ಷಕ್ಕೂ ಕೆಲಸ ಮಾಡಿದ್ದಾರೆ. ಸಂದೇಶ್ ನಾಗರಾಜ್ ಇನ್ನು ಜೆಡಿಎಸ್ ನಿಂದ ಬಿಜೆಪಿಗೆ ಬಂದಿಲ್ಲ. ಅವರು ಬಂದು ಕೆಲಸ ಮಾಡಲಿ. ಈಗಲೇ ಅವನಿಗೆ ಟಿಕೆಟ್ ಎಂದು ಹೇಳುವುದನ್ನು ಒಪ್ಪಲಾಗುವುದಿಲ್ಲ ಎಂದು ಹೆಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ದಲಿತರಿಗೆ ಸಿಎಂ ಸ್ಥಾನ ಎಂದು ಹೇಳಿ, ನಾನೇ ದಲಿತ, ಮುಂದಿನ ಸಿಎಂ ನಾನೇ ಎಂದು ಹೇಳುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ,ಜಿ.ಪರಮೇಶ್ವರ್ ಸೇರಿದಂತೆ ಅನೇಕ ಹಿರಿಯ ನಾಯಕರು ಇದ್ದಾರೆ. ಅವರಿಗೆ ನೀಡಲಿ. ಬಿಜೆಪಿಯು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಟ್ಟಿದೆ. ವಾಜಪೇಯಿ ಕಾಲದಲ್ಲಿ ಅಬ್ದುಲ್ ಕಲಾಂ ಅವರನ್ನು ಹಾಗೂ ಬುಡಕಟ್ಟು ಸಮುದಾಯದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರ ಪತಿಯನ್ನಾಗಿ ಮಾಡಿದೆ ಎಂದು ಹೇಳಿದರು.
'ಹಂಸಲೇಖ ಅವರ ವಿವಾದಕ್ಕೆ ತೆರೆ ಎಳೆಯಿರಿ':
ಪೇಜಾವರ ಶ್ರೀ ಬಗ್ಗೆ ಹಂಸಲೇಖ ಹೇಳಿಕೆ ನೀಡಿರುವುದು ತಪ್ಪು. ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ. ಆದರೂ ಚರ್ಚೆಗಳು ನಡೆಯುತ್ತಿದ್ದು, ಅದರಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಕಲುಷಿತ ಮಾಡುತ್ತಾ ಹೋಗಬಾರದು ಎಂದು ವಿಶ್ವನಾಥ್ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.