ಮೈಸೂರು: ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿರುಕು ಮತ್ತು ದುರಸ್ತಿ ಪದದ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಹೀಗಾಗಿ ಕೆಆರ್ಎಸ್ ಬಿರುಕು ಬಿಟ್ಟಿದೆ ಅಂತಾ ಹೇಳಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಬಾರಿ ಸಂಸದರಾಗಿರುವುದರಿಂದ ಪದ ಪ್ರಯೋಗ ಗೊತ್ತಿಲ್ಲದೆ ಏನೇನೋ ಹೇಳಿದ್ದಾರೆ. ಕೆಆರ್ಎಸ್ ಉಳಿವಿನ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಕೆಆರ್ಎಸ್ ಬಿರುಕು ಬಿಟ್ಟಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಕೆಆರ್ಎಸ್ ವಿಚಾರವಾಗಿ ಜಗಳವಾಡುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಸುಮಲತಾ ಹಾಗೂ ಜೆಡಿಎಸ್ ಮುಖಂಡರು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಕಿತ್ತಾಟ ಇಬ್ಬರಿಗೂ ನಷ್ಟವನ್ನುಂಟು ಮಾಡುತ್ತದೆ. ಮಾತಿನ ಸಮರ ಯಾರಿಗೂ ಲಾಭವನ್ನುಂಟು ಮಾಡುವುದಿಲ್ಲ. ಈ ಮಾತಿನ ಸಮರವನ್ನು ಅಂತ್ಯ ಮಾಡಬೇಕು ಎಂದರು.
ಪಕ್ಷೇತರ ಸ್ಪರ್ಧೆಗೆ ಒಲವು
ಮುಂದಿನ ವಾರದಿಂದ ಜನಾಭಿಪ್ರಾಯಕ್ಕಾಗಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಪಕ್ಷೇತರವಾಗಿ ಸ್ಪರ್ಧಿಸುವಂತೆ ಅಭಿಪ್ರಾಯ ಕೇಳಿ ಬರುತ್ತಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎಂದರು.
ನನ್ನ ಮಗ ಹರೀಶ್‌ಗೌಡನಿಗೆ ಮೂರು ಕ್ಷೇತ್ರಗಳಿಂದ ಆಹ್ವಾನವಿದೆ. ಹುಣಸೂರು, ಕೆ.ಆರ್.ನಗರ, ಚಾಮರಾಜ ಕ್ಷೇತ್ರದಿಂದ ಆಹ್ವಾನವಿದೆ. ನಾನು, ಹರೀಶ್ ಗೌಡ ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ನಿಂತರೂ ಗೆಲ್ಲುತ್ತೇವೆ. ಮತದಾರರ ಅಭಿಪ್ರಾಯ ಕೇಳದೆ 2008 ರಲ್ಲಿ ಸೋತಿದ್ದೇನೆ. ಈಗ ಮತದಾರರನ್ನು ಬಿಟ್ಟು ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಮತದಾನ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಹೇಳಿದರು.
ಇನ್ನು ಮುಂದಿನ ಜಿ.ಪಂ, ತಾ.ಪಂ ಚುನಾವಣೆ ಕುರಿತು ಮಾತನಾಡಿದ ಅವರು, ನಮ್ಮ ಬೆಂಬಲಿಗರನ್ನ ಪಕ್ಷೇತರವಾಗಿ ಕಣಕ್ಕೀಳಿಸುವ ಚಿಂತನೆ ಇದೆ ಎಂದು ಹೇಳಿದರು.
ನಾನು ಸದ್ಯದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷ ಸೇರುವುದಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪಕ್ಷ ಬಿಡದಂತೆ ಕೇಳಿದ್ದಾರೆ. 2023 ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ ಎಂದರು.