ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ವಲ್ಪ ದಿನ ಜೆಡಿಎಸ್ ಪಕ್ಷದಿಂದ ತಟಸ್ಥರಾಗಿರುತ್ತಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 9 ತಿಂಗಳ ಹಿಂದೆ ಸುಮಾರು 80 ಕೋಟಿ ರುಪಾಯಿ ವೆಚ್ಚದಲ್ಲಿ ಮಂಜೂರಾಗಿದ್ದ ಮೈಸೂರು ಜಿಲ್ಲೆಯ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರ ಏಕಾಏಕಿ ರದ್ದು ಮಾಡಿದ್ದು, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಕೂಡಲೇ ರದ್ದು ಪಡಿಸಿರುವ ಕಾಮಗಾರಿಗಳನ್ನು ಪುನಃ ಮಂಜೂರಾತಿ ಮಾಡಬೇಕು. ಇಲ್ಲವಾದರೆ ವಿಧಾನಸೌಧದ ಒಳಗೆ ಹಾಗೂ ಹೊರೆಗೆ ಹೋರಾಟ ಮಾಡುತ್ತೇವೆ ಎಂದರು.
ಇದೇ ವೇಳೆ ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಇತ್ತೀಚೆಗೆ ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದು ಬಿಜೆಪಿ ಜೊತೆ ತುಂಬಾ ಸಲುಗೆಯಿಂದ ಇದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ಮೈಸೂರಿನ ನಗರಪಾಲಿಕೆಯ ಸದಸ್ಯರು ಜಿ.ಟಿ.ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಅವರು ಸ್ವಲ್ಪ ದಿನ ಜೆಡಿಎಸ್ ನಿಂದ ತಟಸ್ಥನಾಗಿರುತ್ತೇನೆ ಎಂದು ಹೇಳಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು. ಅಲ್ಲದೇ ಹುಣಸೂರಿನಲ್ಲಿ ಜನರು ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷವನ್ನು ನೋಡಿಕೊಂಡು ಮತ ಹಾಕುತ್ತಾರೆ ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರಿಗೆ ಟಾಂಗ್ ನೀಡಿದರು.