ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಪಲ್ಟಿ ಹೊಡೆದ ಪರಿಣಾಮ, ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸರಗೂರಿನಲ್ಲಿ ನಡೆದಿದೆ.
ತಾಲೂಕಿನ ಯಶವಂತಪುರ ಗ್ರಾಮದ ಆದಿವಾಸಿ ಕೂಲಿ ಕಾರ್ಮಿಕರಾದ ಕೂಸಮ್ಮ(40) ಹಾಗೂ ದೇವಯ್ಯ(45) ಚಾಲಕನ ಅವಸರಕ್ಕೆ ಬಲಿಯಾಗಿದ್ದಾರೆ.
ಇವರಿಬ್ಬರೂ ಆಟೋ ಮೂಲಕ ಯಶವಂತಪುರ ಗ್ರಾಮದಿಂದ ಹೆಡಿಯಾಲಕ್ಕೆ ಶುಂಠಿ ಬಿಡಿಸಲು ಹೋಗುತ್ತಿದ್ದರು. ಈ ಸಂದರ್ಭ ಹೆಡಿಯಾಲ ಸಮೀಪ ಆಟೋ ಚಾಲಕ ವೇಗವಾಗಿ ಹೋಗುತ್ತಿದ್ದಾಗ ಚಕ್ರ ಹಳ್ಳಕ್ಕೆ ಸಿಲುಕಿದ್ದರಿಂದ ಗಾಡಿ ಪಲ್ಟಿ ಹೊಡೆದಿದೆ. ಪಲ್ಪಿಯಾದ ರಭಸಕ್ಕೆ ಇಬ್ಬರು ಆಟೋದಿಂದ ರಸ್ತೆಯ ಮೇಲೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.