ಮೈಸೂರು : ಕೊರೊನಾ ಆರ್ಭಟದ ನಡುವೆ ವಿಘ್ನ ವಿನಾಯಕನನ್ನು ಸರಳವಾಗಿ ಬರಮಾಡಿಕೊಳ್ಳೋಣ ಎಂದು ಸಾರ್ವಜನಿಕರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಈ ನಡುವೆ ಗಣಪತಿ ತಯಾರಕರ ಬದುಕು ಮಾತ್ರ ಸಂಕಷ್ಟಕ್ಕೆ ಗುರಿಯಾಗಿದೆ.
ಹೌದು, ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಗಣಪತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ತವಕದಲ್ಲಿದ್ದ ಅಸಂಖ್ಯಾತ ಭಕ್ತಗಣಕ್ಕೆ ಕೊರೊನಾ ಅಡ್ಡಿಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಈ ಬಾರಿ ಗಣೋಶೋತ್ಸವಕ್ಕೆ ಭಾರಿ ನಿರಾಶೆ ಮೂಡಿದೆ.
ಆಸೆ ಇಟ್ಟು ಲಕ್ಷಾಂತರ ರೂ. ಖರ್ಚು ಮಾಡಿ ವಿವಿಧ ರೂಪದಲ್ಲಿ ಗಜಾನನ ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಅದೆಷ್ಟೊ ಜನರು ಕೊರೊನಾ ಭೀತಿಯ ನಡುವೆ ಸಭೆ ಸಮಾರಂಭ, ಹಬ್ಬ ಹರಿದಿನಗಳು ಸ್ತಬ್ಧವಾದ ಹಿನ್ನೆಲೆ ಮೂರ್ತಿ ನಿರ್ಮಾಣಕ್ಕೆ ಬ್ರೇಕ್ ಹಾಕಿದ್ದಾರೆ.
ಗಣಪತಿ ಹಬ್ಬದ ಆರು ತಿಂಗಳ ಮುಂಚೆಯೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಲಾವಿದರು, ಈ ಬಾರಿಯ ಹಬ್ಬಕ್ಕೆ 15 ದಿವಸವಿದ್ದರೂ, ಗಣಪತಿ ಮೂರ್ತಿಗಳು ಮಾತ್ರ ಬೆರಳಿಕೆಯಷ್ಟಿವೆ. ಕಳೆದ ವರ್ಷ ಮೂರು ಸಾವಿರಕ್ಕೂ ಹೆಚ್ಚು ಗಣಪತಿ ತಯಾರು ಮಾಡಲಾಗಿತ್ತು. ಆದರೀಗ ಕೊರೊನಾ ಕರಿನೆರಳು ಎಲ್ಲದಕ್ಕೂ ಬ್ರೇಕ್ ಹಾಕಿದೆ.