ಮೈಸೂರು: ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳ ಪರಿಶೀಲನೆಗಾಗಿ 3 ಪೊಲೀಸ್ ಕ್ಯಾಬ್ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
ನಗರದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹೆಚ್ಚಾಗುತ್ತಿರುವುದನ್ನು ತಡೆಯಲು ರಚಿಸಲಾದ ಈ ತಂಡಗಳು ದೇವರಾಜ, ಕೃಷ್ಣರಾಜ ಮತ್ತು ನರಸಿಂಹರಾಜ ಉಪ ವಿಭಾಗದಲ್ಲಿ ಕೆಲಸ ನಿರ್ವಹಿಸಲಿವೆ. ಪ್ರತಿ ಕ್ಯಾಬ್ನಲ್ಲಿ ಓರ್ವ ಎಸ್ಐ ಮತ್ತು ಮೂವರು ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ಮೊದಲು ಸಾರ್ವಜನಿಕ ಸ್ಥಳಗಳಿಗೆ ತೆರಳಿ ಜನಸಂದಣಿ ಹೆಚ್ಚಾಗಿದ್ದರೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಿದ್ದಾರೆ. ಬಳಿಕ ಈ ವಿಡಿಯೋ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುತ್ತದೆ.
ಯಾವುದೇ ಮಾರ್ಷಲ್ಗಳನ್ನು ಈ ಕ್ಯಾಬ್ಗೆ ನೇಮಿಸಿಕೊಂಡಿಲ್ಲ. ಬದಲಿಗೆ ಪೊಲೀಸ್ ಸಿಬ್ಬಂದಿಯೇ ಇರುತ್ತಾರೆ. ಇವರು ಸಾರ್ವಜನಿಕ ಸ್ಥಳಗಳು ಮದುವೆ ಮಂಟಪಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು, ಹೋಟೆಲ್ಗಳು, ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ನಿನ್ನೆ ಬರೋಬ್ಬರಿ 21,794 ಜನರಿಗೆ ಕೊರೊನಾ ದೃಢ : 149 ಮಂದಿ ಬಲಿ