ಮೈಸೂರು : ಕಾರಿನಲ್ಲಿದ್ದ ಶಾಸಕರಿಗೆ ಸಮಸ್ಯೆ ಹೇಳಲು ಬಂದ ಸ್ಥಳೀಯ ಮುಖಂಡನನ್ನು ಎಳೆದುಕೊಂಡು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರಸಭಾ ಸದಸ್ಯ ಸೇರಿದಂತೆ ಮೂವರ ವಿರುದ್ಧ ನಂಜನಗೂಡು ಪಟ್ಟಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿನ್ನೆ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಮಸ್ಯೆಗಳನ್ನು ತಿಳಿಯಲು ಆಗಮಿಸಿದ ವೇಳೆಯಲ್ಲಿ ಸ್ಥಳೀಯ ಸಂಘಟನೆಯೊಂದರ ಮುಖಂಡ ಪುಟ್ಟಸ್ವಾಮಿ ಎಂಬುವರು ಶಾಸಕರಿಗೆ ತಮ್ಮ ಗ್ರಾಮದ ಸಮಸ್ಯೆ ಹೇಳಲು ಅಲ್ಲಿಗೆ ಬಂದಿದ್ದಾರೆ.
ಕಾರಿನಲ್ಲಿದ್ದ ಶಾಸಕರಿಗೆ ಸಮಸ್ಯೆ ಹೇಳುತ್ತಿದ್ದಾಗ ಕೋಪಗೊಂಡ ಸ್ಥಳೀಯ ಬಿಜೆಪಿ ನಗರಸಭಾ ಸದಸ್ಯ ಕಪಿಲೇಶ್ ಆತನ ಸ್ನೇಹಿತರಾದ ರಾಘವೇಂದ್ರ ಹಾಗೂ ಉಮೇಶ್ ಎಂಬುವರು ಸೇರಿ ಪುಟ್ಟಸ್ವಾಮಿಯವರನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಎಂಇಎಸ್ ಕಾರ್ಯಕರ್ತರ ಜಾಮೀನು ಅರ್ಜಿ ವಜಾ ಮಾಡಿದ ಜಿಲ್ಲಾ ನ್ಯಾಯಾಲಯ
ಈ ಸಂಬಂಧ ಹಲ್ಲೆಗೊಳಗಾದ ಸ್ಥಳೀಯ ಮುಖಂಡ ಪುಟ್ಟಸ್ವಾಮಿ ಬಿಜೆಪಿ ನಗರಸಭಾ ಸದಸ್ಯ ಕಪಿಲೇಶ್ ಸೇರಿದಂತೆ ಮೂವರ ವಿರುದ್ಧ ದೂರು ನೀಡಿದ್ದಾರೆ. ಈ ಆರೋಪಿಗಳಿಗೆ ಶಾಸಕರ ಬೆಂಬಲವಿದ್ದು, ರಾಜಕೀಯವಾಗಿ ಸದೃಢರಿದ್ದಾರೆ. ಇವರಿಂದ ನನಗೆ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.