ಮೈಸೂರು: ಜಿಲ್ಲೆಯ ನಾಲೆಗಳಿಗೆ ಕೆಎಸ್ಆರ್ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರ ನೇತೃತ್ವದಲ್ಲಿ ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಬಾರಿ ಬರ ಅಧಿಕವಾದ ಪರಿಣಾಮ ರೈತರು ಹಾಗೂ ಜನರು ತತ್ತರಿಸಿ ಹೋಗಿದ್ದು, ಅತ್ಯಂತ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಫಸಲು ಬೆಳೆಯಲು ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡದ ಕಾರಣ ರೈತಾಪಿ ವರ್ಗ ಮತ್ತಷ್ಟು ಸಂಕಷ್ಟದ ದಿನಗಳನ್ನು ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರೈತರ ಬೇಡಿಕೆಗಳೇನು?
ಜಲಾಶಯಗಳು ಭರ್ತಿಯಾಗದ ಪರಿಣಾಮ ತಮಿಳುನಾಡಿಗೆ ಹರಿಸುವ ನೀರನ್ನು ತಕ್ಷಣವೇ ನಿಲ್ಲಿಸಬೇಕು. ಕಬಿನಿ ಜಲಾಶಯದಿಂದ ಎಡ ಮತ್ತು ಬಲದಂಡೆ ನಾಲೆಗೆ ನೀರು ಬಿಡಬೇಕು. ಹುಲ್ಲಹಳ್ಳಿ-ರಾಂಪುರ ನಾಲೆಗೆ ನೀರು ಒದಗಿಸಬೇಕು. ತಾರಕ ಜಲಾಶಯಕ್ಕೆ ಕಬಿನಿ ಹಿನ್ನೀರಿನಿಂದ ನೀರು ತುಂಬಿಸಿ, ಆ ಜಲಾಶಯದಿಂದ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಬೇಕು. ಜಲಾಶಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳನ್ನು ತುಂಬಿಸಬೇಕು. ಹಾರಂಗಿ ಜಲಾಶಯದಿಂದ ಅಚ್ಚುಕಟ್ಟು ನಾಲೆಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿದರು