ಮೈಸೂರು: ಬಿಜೆಪಿ ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದೆ. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪರವಾಗಿ ಜನರು ಇಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮತದಾರರಿಗೆ ಹಂಚಲು ಹೊರಟಿದ್ದ ಸೀರೆಗಳು ಸಿಕ್ಕಿವೆ. ಈ ಸೀರೆಗಳ ಮೇಲೆ ಯೋಗೇಶ್ವರ್ ಹಾಗೂ ವಿಶ್ವನಾಥ್ ಅವರ ಫೋಟೋಗಳಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗವನ್ನು ಸಿದ್ದರಾಮಯ್ಯ ಆಗ್ರಹಿಸಿದರು.
ಸರ್ಕಾರದಲ್ಲಿದ್ದುಕೊಂಡು ಬಿಜೆಪಿಗರು ಅಕ್ರಮ ಮಾಡುತ್ತಿದ್ದು, ಇವರಿಗೆ ಯಾವ ನೈತಿಕತೆ ಇದೆ ಎಂದು ಕೇಳಿದರು. ಬಿಎಸ್ವೈ ಮುಖ್ಯಮಂತ್ರಿಯಾಗಿ ಉಳಿಯಲು ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ. ಚುನಾವಣಾ ಕಣದಲ್ಲಿರಲು ಅವರಿಗೆ ಏನು ಅರ್ಹತೆಯಿದೆ ಎಂದು ಗುಡುಗಿದರು.
ಶ್ರೀರಾಮುಲು ನನ್ನ ವಿರುದ್ಧ ಸೋತಿದ್ದಕ್ಕೆ ಹತಾಶೆಗೊಂಡಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಗೆದ್ದರೆ ಅವರನ್ನು ಡಿಸಿಎಂ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಸೋತವರನ್ನು ಡಿಸಿಎಂ ಮಾಡಿದರು ಎಂದು ಲೇವಡಿ ಮಾಡಿದ್ರು.
ಪರಿಶಿಷ್ಟ ಜಾತಿಯವರಿಗೆ ಶೇ 7 ರಷ್ಟು ಮೀಸಲಾತಿ ಕೊಡದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದರು. ಇಂತಹವರು ನನ್ನ ರಾಜೀನಾಮೆ ಕೇಳುತ್ತಾರೆ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.