ಮೈಸೂರು: ವಿಶ್ವ ವಿಖ್ಯಾತ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ನಂತರ ಅರಮನೆ ಪ್ರವೇಶಿಸಿದ ಆನೆಗಳ ತಂಡ ಶಿಬಿರಕ್ಕೆ ಹೋಗುವ ಮುನ್ನ ಮಜ್ಜನ ಮಾಡಿಸಲಾಯಿತು.
ಅರಣ್ಯ ಭವನದಿಂದ ನಡಿಗೆಯಲ್ಲಿ ಹೊರಟ ಅಭಿಮನ್ಯು ನೇತೃತ್ವದ ವಿಕ್ರಮ, ಗೋಪಾಲಸ್ವಾಮಿ, ಧನಂಜಯ, ಅಶ್ವತ್ಥಾಮ, ಕಾವೇರಿ, ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ಅಶೋಕಪುರಂ ರಸ್ತೆ ಮೂಲಕ ಬಲ್ಲಾಳ್ ವೃತ್ತ, ಜೆಎಲ್ ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಹಾದು ಗನ್ ಹೌಸ್, ಬಿಎನ್ ರಸ್ತೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರವನ್ನು ತಲುಪಿದವು.
ಅರಮನೆಯಲ್ಲಿ ನಡೆದ ಪೂಜೆಯ ನಂತರ ಅರಮನೆ ಆವರಣದ ಆನೆ ಶಿಬಿರದಲ್ಲಿರುವ ತೊಟ್ಟಿಯಲ್ಲಿ ಮಜ್ಜನ ಮಾಡಿಸಿಕೊಂಡು ರಿಲ್ಯಾಕ್ಸ್ ಆದವು. ಮಜ್ಜನದ ನಂತರ ಶಿಬಿರಕ್ಕೆ ತೆರಳಿದವು.
ಇಂದಿನಿಂದ ಅಕ್ಟೋಬರ್ 17 ರವರೆಗೆ ಅರಮನೆ ಅಂಗಳದಲ್ಲಿ ಗಜಪಡೆ ಬೀಡು ಬಿಡಲಿದ್ದು, ಸೆಪ್ಟೆಂಬರ್ 19 ರಿಂದ ಅರಮನೆಯ ಆವರಣದಲ್ಲಿ ತಾಲೀಮು ನಡೆಸಿ, ಅಕ್ಟೋಬರ್ 15 ರಂದು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ.