ಮೈಸೂರು: ಬೀಗರೂಟ, ಬಾಡೂಟಕ್ಕಾಗಿ ಜಮೀನು ಮಾರಾಟ ಮಾಡುವ ಬದಲು, ಮಗಳ ಹೆಸರಿಗೆ ಅದೇ ಜಮೀನನ್ನು ಬರೆಯಿರಿ ಎಂದು ಸಂಸದ ಪ್ರತಾಪ್ ಸಿಂಹ ಭೂ ಮಾಲೀಕರಿಗೆ ಕಿವಿಮಾತು ಹೇಳಿದರು.
ಜಿಲ್ಲೆಯ ಇಲವಾಲ ಹೋಬಳಿಯ ಕೆ.ಆರ್.ಎಸ್.ನಿಸರ್ಗ ಬಡಾವಣೆಗೆ ಜಮೀನು ಕೊಟ್ಟ ಭೂ ಮಾಲೀಕರಿಗೆ 'ಸಾಂತ್ವನ' ನಿವೇಶನಗಳ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದುವೆಗಾಗಿ ಜಮೀನು ಮಾರಾಟ ಮಾಡಿ, ಅದ್ಧೂರಿಯಾಗಿ ಮದುವೆ ಹಾಗೂ ಬೀಗರೂಟ ಮಾಡುವುದಕ್ಕಿಂತ ಅದೇ, ಜಮೀನನ್ನು ಮಗಳ ಹೆಸರಿಗೆ ಬರೆಯಿರಿ. ನನಗೂ ಕೂಡ ಒಬ್ಬ ಮಗಳಿದ್ದಾಳೆ. ದುಂದುವೆಚ್ಚಕ್ಕೆ ಕಡಿವಾಳ ಹಾಕಿ, ಒಳ್ಳೆಯ ಬದುಕು ಸಾಗಿಸಿ ಎಂದು ಸಲಹೆ ನೀಡಿದರು.
ಗೃಹ ಮಂಡಳಿಗೆ ಜಮೀನು ನೀಡಿ ನಿವೇಶನ ಪಡೆದ ಭೂ ಮಾಲೀಕರು, ನಿವೇಶನಗಳನ್ನು ಮಾರಾಟ ಮಾಡಬೇಡಿ. ಕೆಲವರು ಪ್ರಭಾವ ಬಳಸಿ ನಿವೇಶನಕೊಳ್ಳಲು ಮುಂದಾಗುತ್ತಾರೆ. ಅಂತಹ ಮಾತುಗಳಿಗೆ ಮರುಳಾಗಿ ನಿವೇಶನ ಮಾರಾಟ ಮಾಡಿದರೆ, ಮುಂದಿನ ದಿನಗಳಲ್ಲಿ ಕಷ್ಟ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.