ಮೈಸೂರು: ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಅಷ್ಟಾಗಿಲ್ಲ. ಆದರೆ, ಹೌಸ್ ಕೀಪಿಂಗ್, ಸ್ವಚ್ಛತೆ ಮಾಡುವವರು, ಲಾಂಡ್ರಿ ಕೊರತೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಲವು ಕಡೆ ಈ ಕೆಲಸವನ್ನು ವೈದ್ಯರೇ ಮಾಡುತ್ತಿದ್ದಾರೆ. ಇವತ್ತು ಮೈಸೂರಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಬಹುದು. ಸೋಂಕಿತರ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಿದ್ದೇವೆ. ಐಸಿಯುನಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದು, ಅವರು ಸಹ ಗುಣಮುಖರಾಗುತ್ತಿದ್ದಾರೆ ಎಂದರು.
ನಿನ್ನೆ 36 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರಿಗೆ ಆಕ್ಸಿಜನ್ ಮಾಸ್ಕ್ ಹಾಕಿ ಚಿಕಿತ್ಸೆ ಕೊಟ್ಟರೂ ಆತ ಬದುಕಲಿಲ್ಲ. ಸಂಪರ್ಕಕ್ಕೆ ಸಿಗದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದರ ಮೂಲ ಕಂಡುಹಿಡಿಯಲು ತೊಂದರೆಯಾಗುತ್ತಿದೆ ಎಂದರು.