ಮೈಸೂರು: ದೇವಾಲಯದ ಆದಾಯದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ ಸಪ್ತ ದೇವಾಲಯಗಳಿಗೆ ಬೀಗ ಹಾಕಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಸಪ್ತ ದೇವಾಲಯಗಳಲ್ಲಿ ಪೂಜೆ ಮಾಡುವ ಪೂಜಾರಿಗಳು ದೇವಾಲಯಕ್ಕೆ ಬರುವ ಆದಾಯದ ಬಗ್ಗೆ ಇಲ್ಲಿವರೆಗೆ ಲೆಕ್ಕ ತೋರದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಲೆಕ್ಕ ಕೇಳಲು ಹೋದರೆ ಲೆಕ್ಕ ನೀಡುತ್ತಿಲ್ಲ. ಆದರಿಂದ ದೇವಾಲಯಕ್ಕೆ ಟ್ರಸ್ಟ್ ರಚಿಸಬೇಕೆಂದು ಮತ್ತೊಂದು ಗುಂಪು ಗ್ರಾಮದಲ್ಲಿರುವ 7 ದೇವಾಲಗಳಿಗೆ ಬೀಗ ಹಾಕಿದೆ. ಶಿವರಾತ್ರಿ ದಿನವೂ ಈ 7 ದೇವಾಲಯಗಳಲ್ಲಿ ಪೂಜೆ ನಡೆದಿಲ್ಲ. ಈ ಎರಡು ಗುಂಪಗಳ ನಡುವಿನ ಕಿತ್ತಾಟಕ್ಕೆ ಶಿವರಾತ್ರಿ ದಿನ ಪೂಜೆ ಸಲ್ಲಿಸಲು ಬಂದ ಭಕ್ತರು ದೇವಾಲಯದ ಹೊರಗಡೆ ಪೂಜೆ ಮಾಡಿಕೊಂಡು ಹೋಗಿದ್ದಾರೆ. ಈಗ ರಾತ್ರಿಯಿಂದ 7 ದೇವಾಲಯಗಳಿಗೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯದ ಟ್ರಸ್ಟ್ ಅಧ್ಯಕ್ಷೆ ಶಾಂತಾಲಾ, ಪೂಜಾರಿಗಳು ಲೆಕ್ಕ ಕೇಳಿದರೆ ನಮ್ಮ ಮೇಲೆ ಗೂಂಡಾಗಿರಿ ಮಾಡುತ್ತಾರೆ. ಹುಂಡಿ ಲೆಕ್ಕ ಸಹ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ದೇವಾಲಯಕ್ಕೆ ಬೀಗ ಹಾಕಿರುವುದರ ಹಿಂದೆ ಗ್ರಾಮದ ಶಿಕ್ಷಕರೊಬ್ಬರು ಕಾರಣ ಎಂದು ದೇವಾಲಯದ ಅರ್ಚಕ ವೇಣುಗೋಪಾಲ ಆರೋಪಿಸಿದ್ದಾರೆ.