ಚಾಮರಾಜನಗರ/ಮೈಸೂರು: ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿರುವ ಕಾಂಗ್ರೆಸ್ನ ಧ್ರುವನಾರಾಯಣ ಅವರಿಗಾಗಿ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ತ್ಯಾಗ ಮಾಡಲು ಆರ್ ಧರ್ಮಸೇನ ಮುಂದಾಗಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಚಾಮರಾಜನಗರದಲ್ಲಿ ಆರ್. ಧ್ರುವನಾರಾಯಣ ಕಂಡಿರುವ ಸೋಲು ಸೋಲಲ್ಲ. ಇದನ್ನು ನೆನಪು ಮಾಡಿಕೊಂಡರೆ ಬೇಸರವಾಗುತ್ತದೆ. ಆದ್ದರಿಂದ ನನ್ನ ವಿಧಾನ ಪರಿಷತ್ ಸ್ಥಾನವನ್ನು ಅವರಿಗೆ ಬಿಟ್ಟು ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಪಕ್ಷದ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಈ ವಿಚಾರವಾಗಿ ಮನವಿ ಮಾಡಿ, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಆರ್. ಧ್ರುವನಾರಾಯಣ ಅವರನ್ನು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವಂತೆ ಮಾಡುತ್ತೇವೆ. ಈ ಬಗ್ಗೆ ಪಕ್ಷದ ನಿಲುವು ಮುಖ್ಯ ಎಂದು ಧರ್ಮಸೇನ ತಿಳಿಸಿದರು.
ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆರ್ ಧ್ರುವನಾರಾಯಣ ರಾಜ್ಯದಲ್ಲಿಯೇ ಅತ್ಯುತ್ತಮ ಕೆಲಸಗಾರ. ಆದರೆ, ಅವರ ಸೋಲು ಪಕ್ಷದ ಮುಖಂಡರಿಗಷ್ಟೇ ಅಲ್ಲ. ಮತದಾರರಿಗೂ ಬೇಸರ ತಂದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪರಿಷತ್ ಸದಸ್ಯ ಹೇಳಿದರು.
ಚಾಮರಾಜನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಮಾತನಾಡಿ, ಆರ್. ಧ್ರುವನಾರಾಯಣ ಅವರ ಸೋಲು ಮತದಾರರಿಗೆ ಪಶ್ಚಾತಾಪವಾಗಿ ಕಾಡಲಿದೆ ಎಂದು ಬೇಸರ ವ್ಯಕ್ತಪಡಿಸಿದರು.