ಮೈಸೂರು: ಹಿಂದೂ ಹಿಂದೂ ಎನ್ನುವ ಬಿಜೆಪಿಗರು ಹಬ್ಬದ ದಿನ ಎಡೆ ಹಾಕಲು ಸಹ ಬಿಡದೇ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿರುವುದು ಅಮಾನವೀಯ ಕ್ರಮ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಇಂದು ಸಿದ್ದರಾಮಯ್ಯ ಅವರ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ರಾಹಿಂ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಅನ್ನು ದಮನ ಮಾಡುವ ಆಲೋಚನೆ ಹೊಂದಿದ್ದರೆ ಅದೊಂದು ಹಗಲು ಕನಸು ಅಷ್ಟೇ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ನೀವು ಸುಮ್ಮನಿದ್ದಿರಿ. ಈಗ ಮನೆಯಲ್ಲಿ ಹಬ್ಬದ ವೇಳೆ ಒಂದು ದಿನ ಎಡೆ ಹಾಕಲು ಸಹ ಬಿಟ್ಟಿಲ್ಲ. 4 ದಿನ ವಶದಲ್ಲಿಟ್ಟುಕೊಂಡು ಈಗ ಬಂಧಿಸಿದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಹಿಂದೂ ಹಿಂದೂ ಎಂದು ಮಾತನಾಡುವ ನೀವು ಹಬ್ಬದ ಸಮದರ್ಭದಲ್ಲೇ ಡಿಕೆಶಿ ಅವರನ್ನು ಬಂಧಿಸಿರುವುದನ್ನು ಕರ್ನಾಟಕದ ಜನರು ನೋಡುತ್ತಿದ್ದಾರೆ. ಇವತ್ತು ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಂತಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಏನಾದರೂ ಕರ್ನಾಟಕದಲ್ಲಿ ನಾವು ಇದರಿಂದ ಕುಗ್ಗಿದ್ದೇವೆ ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಚೆಂಡನ್ನು ನೆಲಕ್ಕೆ ಎಷ್ಟು ಬಲವಾಗಿ ಎಸೆಯುತ್ತೇವೋ ಅಷ್ಟು ಮೇಲಕ್ಕೆ ಪುಟಿಯುತ್ತದೆ. ಕಾಲಾಯ ತಸ್ಮೈ ನಮಃ ಎಂದು ಇಬ್ರಾಹಿಂ ವ್ಯಂಗ್ಯವಾಡಿದ್ರು.