ಮೈಸೂರು: ನಾಳೆ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಗಣ್ಯರಿಂದ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಗುವುದು. ಇದಕ್ಕೆ ಸಿದ್ಧತೆ ಭರದಿಂದ ಸಾಗಿವೆ.
ನಾಡಹಬ್ಬ ದಸರಾ-2021 ಉದ್ಘಾಟನೆ ಅ.7ರಂದು ಬೆಳಗ್ಗೆ 8.15 ರಿಂದ 8.45 ರೊಳಗಿನ ಶುಭ ತುಲಾ ಲಗ್ನದಲ್ಲಿ ಬೆಳ್ಳಿಯ ರಥದಲ್ಲಿರುವ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ದಸರಾ ಮಹೋತ್ಸವ ಉದ್ಘಾಟನೆ ನೆರವೇರಿಸಲಾಗುತ್ತದೆ.
ಈ ಬಾರಿ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾಗವಹಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ನಾಳಿನ ಉದ್ಘಾಟನೆಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಶೃಂಗರಿಸಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೆ ವಾಟರ್ ಪ್ರೂಫ್ ವೇದಿಕೆಯನ್ನು ಹಾಕಲಾಗಿದೆ.
ಕೋವಿಡ್ ಹಿನ್ನೆಲೆ ಕೇವಲ 400 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಉದ್ಘಾಟನಾ ಸಮಾರಂಭವನ್ನು ವರ್ಚುಯಲ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಕಾರ್ಯಕ್ರಮದಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಲು ಸೂಚಿಸಲಾಗಿದೆ.