ಮೈಸೂರು : ಲಾಕ್ಡೌನ್ ಕಾರಣ ನಗರ ಪ್ರದೇಶಗಳಿಂದ ಹಳ್ಳಿಗೆ ಬಂದ ಜನರಿಂದ ಹಳ್ಳಿಯಲ್ಲಿ ಕೋವಿಡ್ ಹೆಚ್ಚಾಗಲು ಕಾರಣವಾಗಿದೆ. ಹಳ್ಳಿಯ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಮನವಿ ಮಾಡಿದ್ದಾರೆ.
ಇಂದು ಜೆಎಸ್‌ಎಸ್ ಆಸ್ಪತ್ರೆಗೆ ಭೇಟಿ ನೀಡಿ ಎರಡನೇ ಕೋವಿಡ್ ಲಸಿಕೆ ಪಡೆದ ನಂತರ ಆಸ್ಪತ್ರೆಯಲ್ಲಿ ಕೋವಿಡ್ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಕೋವಿಡ್ ಬಗ್ಗೆ ಯಾವುದೇ ರೀತಿಯ ಆತಂಕ ಸೃಷ್ಟಿಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ಆಸ್ಪತ್ರೆಯಲ್ಲಿ ಕೋವಿಡ್ಗೆ ಏನೆಲ್ಲಾ ಚಿಕಿತ್ಸೆಗಳಿವೆ ಅವುಗಳನ್ನು ಕೊಡಬಹುದು. ಯಾರಿಂದಲೂ ಶೇ100ರಷ್ಟು ಚಿಕಿತ್ಸೆ ಕೊಡಲು ದೇಶದಲ್ಲಿ ಹಾಗೂ ಪ್ರಪಂಚದಲ್ಲಿ ಸಾಧ್ಯವಿಲ್ಲ. ಆದ್ದರಿಂದ ಜನ ಸಾಮಾನ್ಯರು, ಎಲ್ಲರೂ ಕೋವಿಡ್ನ ಸಲಹೆ, ಸೂಚನೆಗಳನ್ನು ಪಾಲಿಸಬೇಕು ಎಂದರು.
ಮುಂಬೈ ಮತ್ತು ದೆಹಲಿಯಿಂದ ಹಳ್ಳಿಗೆ ಬಂದಂತಹ ಜನರೇ ಹಳ್ಳಿಯಲ್ಲಿ ಕೊರೊನಾ ಹೆಚ್ಚಾಗಲು ಕಾರಣರಾಗಿದ್ದು, ನಗರ ಪ್ರದೇಶದಲ್ಲಿ ಇದ್ದಿದ್ದರೆ ಚಿಕಿತ್ಸೆ ನೀಡಬಹುದು.
ಆದರೆ, ಹಳ್ಳಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡಿದೆ. ಈ ಸಂದರ್ಭದಲ್ಲಿ ಹಳ್ಳಿಯ ಜನ ಎಚ್ಚರಿಕೆಯಿಂದ ಇದ್ದು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.
ಜಎಸಎಸ್ ಆಸ್ಪತ್ರೆಯಿಂದ ಸರ್ಕಾರಕ್ಕೆ 411 ಬೆಡ್ಗಳನ್ನು ನೀಡಲಾಗಿದೆ. ಸರ್ಕಾರ ಮತ್ತೆ 300 ಆಕ್ಸಿಜನ್ ಬೆಡ್ಗಳನ್ನು ಕೇಳಿದೆ. ಆದರೆ, ಆಕ್ಸಿಜನ್ ಸಿಲಿಂಡರ್ ಬಂದ ತಕ್ಷಣ ನೀಡುತ್ತೇವೆ.
ಜೆಎಸ್‌ಎಸ್ ಆಸ್ಪತ್ರೆಯಿಂದ ಹೊಸ ಆಕ್ಸಿಜನ್ ಉತ್ಪಾದಿಸುವ ಯೂನಿಟ್‌ನ ಖರೀದಿ ಮಾಡಲಾಗಿದೆ. ಮುಂದಿನ ದಿನಗಳನ್ನು ಇದನ್ನು ಉಪಯೋಗಿಸಬಹುದು ಎಂದು ಸೂತ್ತೂರು ಶ್ರೀಗಳು ಇದೇ ಸಂದರ್ಭದಲ್ಲಿ ಹೇಳಿದರು.