ಮೈಸೂರು: ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ (congress misleading people) ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ (CC Pail) ಹೇಳಿದರು.
ಇಂದು ಚಾಮುಂಡಿ ಬೆಟ್ಟದ ರಸ್ತೆ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಪಾಟೀಲ್, ಬಿಟ್ ಕಾಯಿನ್ (bitcoin scam) ವಿಚಾರದಲ್ಲಿ ಪ್ರಿಯಾಂಕಾ ಖರ್ಗೆ ಪಂಚ ಪ್ರಶ್ನೆಗಳನ್ನು ಕೇಳಿ, ಕೋರ್ಟ್‌ನಿಂದ 5 ಸಾವಿರ ದಂಡ ಕಟ್ಟಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಜನರನ್ನು ದಾರಿತಪ್ಪಿಸಲು ಬಿಟ್ ಕಾಯಿನ್ ವಿಚಾರವನ್ನು ಪ್ರಸ್ತಾಪ ಮಾಡುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ತನಿಖಾ ಸಂಸ್ಥೆ ನೇಮಿಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಇದನ್ನು ಇಡಿ ಮತ್ತು ಸಿಬಿಐಗೆ ಒಪ್ಪಿಸಲು ಸಿದ್ಧವಿದೆ. ಆದರೆ, ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ ನಾನು. ಪಕ್ಷದ ಕಚೇರಿಯ ನಾಲ್ಕು ಗೋಡೆಗಳ ನಡುವೆ ಮಾತನಾಡುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಜಿಯೋಟ್ರಾಯಲ್ ತಂತ್ರಜ್ಞಾನ ಬಳಸಿ ಕುಸಿತ ರಸ್ತೆ ರಿಪೇರಿ : ಭಾರಿ ಮಳೆಗೆ ಚಾಮುಂಡಿ ಬೆಟ್ಟದ ನಂದಿಗೆ ಹೋಗುವ ರಸ್ತೆ ಕುಸಿದಿದೆ. ಹೆಚ್ಚಾಗಿ ಮಳೆಯಾದ್ದರಿಂದ ರಸ್ತೆಯಲ್ಲಿ ತೇವಾಂಶ ಹೆಚ್ಚಾಗಿ ಭೂ ಕುಸಿತ ಉಂಟಾಗಿದೆ. ತಕ್ಷಣವೇ ಜಿಯೋಟ್ರಾಯಲ್ ತಂತ್ರಜ್ಞಾನ ಅಂದ್ರೆ, ಕಲ್ಲು ಮತ್ತು ಮೆಸ್ ಗಳನ್ನು ಹಾಕಿ ತಡೆಗೋಡೆ ನಿರ್ಮಿಸಿ, ರಸ್ತೆ ಮಾಡಿದರೆ ಬಂದಂತಹ ನೀರು ಕಲ್ಲಿನ ಮಧ್ಯೆ ಹರಿದುಹೋಗುತ್ತದೆ.
ಆಗ ರಸ್ತೆ ಕುಸಿತ ಕಂಡು ಬರುವುದಿಲ್ಲ. ಹೀಗೆ ನಿರ್ಮಾಣ ಮಾಡಿದರೆ ದೀರ್ಘ ಕಾಲ ರಸ್ತೆ ಬಾಳಿಕೆ ಬರುತ್ತದೆ. ಆದ್ದರಿಂದ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆಯನ್ನು ಜಿಯೋಟ್ರಾಯಲ್ ತಂತ್ರಜ್ಞಾನ ಬಳಸಿ ಶೀಘವೇ ರಸ್ತೆ ದುರಸ್ಥಿ ಮಾಡಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.