ಮೈಸೂರು : ನಮ್ಮ ನಡುವೆ ಕೆಲವು ಗೊಂದಲಗಳು ಉಂಟಾಗಿದ್ದವು. ಅದನ್ನು ಸರಿಪಡಿಸಿಕೊಂಡು ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆಯೇ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿತ್ತು. ಅದರ ಪ್ರಕಾರ ಮೂರು ಬಾರಿ ಮೇಯರ್ ಹುದ್ದೆ ಜೆಡಿಎಸ್ಗೆ, ಎರಡು ಬಾರಿ ಮೇಯರ್ ಸ್ಥಾನ ಕಾಂಗ್ರೆಸ್ಗೆ ಎಂಬ ಒಪ್ಪಂದವಾಗಿತ್ತು. ಈ ನಡುವೆ ಆಪರೇಷನ್ ಕಮಲ ಮತ್ತು ಕೆಲವು ಗೊಂದಲಗಳು ಸೃಷ್ಟಿಯಾದವು. ಆದರೂ ಸ್ಥಳೀಯ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಜೊತೆ ಮಾತುಕತೆ ನಡೆಸಿದ್ದು, ಎರಡು ಪಕ್ಷಗಳ ಪಾಲಿಕೆಯ ಸದಸ್ಯರ ಅಭಿಪ್ರಾಯ ಪಡೆಯಲಾಗುವುದು. ಜೊತೆಗೆ ಪಾಲಿಕೆಯಲ್ಲಿ ಮೈತ್ರಿ ಮುಂದುವರಿಸಲು ಹೆಚ್.ಡಿ. ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.