ಮೈಸೂರು: ಹಿಂದೂ ವಿರೋಧಿ ಧೋರಣೆಯಿಂದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ ಎಂದು ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೃಷ್ಣಧಾಮದ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್, ಕಾಂಗ್ರೆಸ್ ಒಂದಾಗಿದ್ದರಿಂದ ಜನರಲ್ಲಿ ಹಿಂದುತ್ವದ ಭಾವನೆ ಜಾಗೃತವಾಯಿತು. ಅದೇ ಕಾರಣದಿಂದಾಗಿ ಈ ಎಲ್ಲಾ ನಾಯಕರು ಸೋಲಬೇಕಾಗಿ ಬಂತು ಎಂದರು.
ಹಿರಿಯ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೆಚ್.ಡಿ ದೇವೇಗೌಡರು ಸೋತಿರುವುದಕ್ಕೆ ವೈಯಕ್ತಿಕವಾಗಿ ಬೇಸರವಾಗಿದೆ. ಅಂತಹ ಹಿರಿಯ ನಾಯಕರು ಗೆಲ್ಲಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗೋಡ್ಸೆ ಪರ ವಕಾಲತ್ತು ವಹಿಸಿದ ವ್ಯಕ್ತಿ ಚುನಾವಣೆಯಲ್ಲಿ ಗೆದ್ದದ್ದು ನನಗೆ ಅಸಮಾಧಾನ ತಂದಿದೆ. ಅಂತಹ ವ್ಯಕ್ತಿ ಗೆಲ್ಲಬಾರದಿತ್ತು. ಮಹಾತ್ಮ ಗಾಂಧಿ ಕೊಂದ ಗೋಡ್ಸೆ ಬಗ್ಗೆ ವೈಭವಿಕರಿಸುವುದು ಅಗತ್ಯವಿಲ್ಲ. ಗೋಡ್ಸೆಯನ್ನು ಬೆಂಬಲಿಸಬಾರದು ಎಂದು ಅಸಮಾಧಾನ ಹೊರಹಾಕಿದರು.
ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಅಲ್ಲಿರುವ ಹಿಂದೂ- ಮುಸ್ಲಿಮರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. 370 ನೇ ವಿಧಿ ಅತೀ ಸೂಕ್ಷ್ಮ ವಿಚಾರ, ಆ ಬಗ್ಗೆ ಚರ್ಚಿಸಲು ನಾನು ಹೋಗುವುದಿಲ್ಲವೆಂದರು. ಬಡವ, ದಿನದಲಿತ, ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ನೂತನ ಯೋಜನೆ ತಂದಿರುವುದು ಜನಪರವಾಗಿದೆ. ಮೋದಿ ನೇತೃತ್ವದ ಸರ್ಕಾರ ಸರ್ವಧರ್ಮವನ್ನು ಒಗ್ಗೂಡಿಸಿ ಯಾರಿಗೂ ಅನ್ಯಾಯವಾಗದಂತೆ ಆಡಳಿತ ನಡೆಸಬೇಕಿದೆ. ಈ ಬಾರಿಯಾದರು ಗೋಹತ್ಯೆ ನಿಷೇದ ಕಾಯ್ದೆ ಜಾರಿಯಾಗಬೇಕೆಂಬ ಬಯಕೆ ನಮ್ಮದಾಗಿದೆ ಎಂದು ಹೇಳಿದರು.
ಈಗಾಗಲೇ ಶ್ರೀ ರಾಮಮಂದಿರ ನಿರ್ಮಾಣದ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಲಾಗಿದೆ. ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು..