ಮೈಸೂರು/ಬಾಗಲಕೋಟೆ: ಗಜೇಂದ್ರಗಡ ತಾಲೂಕಿನ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಕಾಯಕಯೋಗಿ, ತ್ರಿವಿಧ ದಾಸೋಹಿ ಅಭಿನವ ಅನ್ನದಾನೇಶ್ವರ ಡಾ.ಸಂಗನಬಸವ ಸ್ವಾಮೀಜಿ ಇಂದು ಬೆಳಗ್ಗೆ ಲಿಂಗೈಕ್ಯರಾಗಿದ್ದು, ಸುತ್ತೂರು ಮಠದ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಬಸವ ಪುರಾಣ ಪ್ರವಚನ ಮುಂತಾದ ಕಾರ್ಯಕ್ರಮಗಳನ್ನು ಡಾ.ಸಂಗನಬಸವ ಸ್ವಾಮೀಜಿ (Dr. Sanganabasava Swamiji) ನಾಡಿನಾದ್ಯಂತ ನಿರಂತರವಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಏರ್ಪಡಿಸುತ್ತ ಜನತೆಯಲ್ಲಿ ಧಾರ್ಮಿಕ ಶ್ರದ್ಧೆ ಮೂಡಿಸಲು ಅವಿರತವಾಗಿ ಶ್ರಮಿಸುತ್ತಿದ್ದರು.
ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಪೂಜೆ, ಪ್ರಸಾದ ಹಾಗೂ ವೈಯಕ್ತಿಕ ಸಂಗತಿಗಳನ್ನು ಗಮನಿಸದೆ ಕಾರ್ಯತತ್ಪರರಾಗುತ್ತಿದ್ದರು. 1990ರಲ್ಲಿ ಹೊಸಪೇಟೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೂರನೇ ಸಮ್ಮೇಳನವನ್ನು ಎಂ.ಪಿ.ಪ್ರಕಾಶ್ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದರು. ಇದೇ ತಿಂಗಳ 9 ಮತ್ತು 10 ರಂದು ಹಾಲಕೆರೆ ಅನ್ನದಾನೇಶ್ವರ ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ ನಿರಂಜನ ಪಟ್ಟಾಧಿಕಾರ ಅನುಗ್ರಹಿಸಿದ್ದರು ಎಂದು ಸ್ಮರಿಸಿದ್ದಾರೆ.
ಬಾದಾಮಿಯ ಶಿವಯೋಗಿ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ:
ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದಲ್ಲಿ (Badami Shivayogi Temple) ನೀರವ ಮೌನ ಆವರಿಸಿದೆ. ಶಿವಯೋಗ ಮಂದಿರದಲ್ಲಿ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ಸ್ಥಳೀಯ ಶಿವಲಿಂಗ ಸ್ವಾಮೀಜಿ ಮಾತನಾಡಿ, ಇಂತಹ ಶ್ರೀಗಳನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಟಕುರ್ಕಿಯ ಗದಗಯ್ಯ ಸ್ವಾಮೀಜಿ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು.
ಇದನ್ನೂ ಓದಿ: ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿ ಲಿಂಗೈಕ್ಯ: ನಾಳೆ 3 ಗಂಟೆಗೆ ಅಂತಿಮ ಸಂಸ್ಕಾರ