ಮೈಸೂರು: ಇಂದಿನ ಕಷ್ಟದ ದಿನಗಳಲ್ಲೂ ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕಿಸದೇ ಕೋವಿಡ್ನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ಲಕ್ಷ ರೂ.ಪರಿಹಾರ ಘೋಷಣೆ ಮಾಡಿರುವ ಮಾನವೀಯ ಕೆಲಸಕ್ಕೆ ನಾನು ಸ್ವಾಗತ ಮಾಡುತ್ತೇನೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಸುತ್ತೂರು ಶ್ರೀಗಳ ಆರ್ಶೀವಾದ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲೆ ಲಸಿಕೆ ನೀಡುವುದರಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನವನ್ನು ಪಡೆದಿದ್ದು, 10 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಲಾಗಿದೆ. ಇನ್ನೂ ಹೆಚ್ಚಿನ ಲಸಿಕೆ ಕೊಡುವಂತೆ ಸರ್ಕಾರವನ್ನು ಕೇಳಿದ್ದೇವೆ. 21 ರ ನಂತರ ಹೆಚ್ಚು ಲಸಿಕೆಯನ್ನು ಜಿಲ್ಲೆಗೆ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನೂ 1ವಾರಗಳ ಕಾಲ ಡಾಕ್ಟರ್ ನಡಿಗೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ನಡೆಯಲಿದ್ದು, ಇದೊಂದು ಉಪಯುಕ್ತ ಕಾರ್ಯಕ್ರಮ ಎಂದರು.
ಇನ್ನೂ ಮೈಸೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಕೂಡ ಹೆಚ್ಚು ಮಾಡಿದ್ದೇವೆ. ಇನ್ನೊಂದು ವಾರಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಕಂಟ್ರೋಲ್ಗೆ ಬರಲಿದೆ ಎಂದರು.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸದ್ಯರು ಕೋವಿಡ್ನಿಂದ ಮೃತಪಟ್ಟಿದ್ದರೆ 1 ಲಕ್ಷ ಹಣ ನೀಡುವ ಬಗ್ಗೆ ಸಿಎಂ ಪರಿಹಾರ ಘೋಷಣೆ ಮಾಡಿದ್ದಾರೆ. ಅವರ ಮಾನವೀಯ ದೃಷ್ಟಿಯ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಇದರಿಂದ 300 ರಿಂದ 400 ಕೋಟಿ ಹಣ ಖರ್ಚಾಗುತ್ತದೆ. ಕಷ್ಟದಲ್ಲಿ ಇರುವವರಿಗೆ ಸಹಾಯವಾಗಲಿದೆ ಎಂದು ಹೇಳಿದರು.